ADVERTISEMENT

ಆಲೂರು | ದಿಕ್ಕಿಲ್ಲದ ದೀಪಾವಳಿ ಆಚರಣೆ ಆರಂಭ

15 ದಿನಗಳ ಕಾಲ ನಡೆಯುವ ವಿಶಿಷ್ಟ ಆಚರಣೆ: ಗ್ರಾಮೀಣ ಭಾಗದಲ್ಲಿ ಸಂಭ್ರಮ

ಎಂ.ಪಿ.ಹರೀಶ್
Published 19 ಅಕ್ಟೋಬರ್ 2025, 5:11 IST
Last Updated 19 ಅಕ್ಟೋಬರ್ 2025, 5:11 IST
ಆಲೂರು ತಾಲ್ಲೂಕು ಮುರುಡೂರು ಗ್ರಾಮದ ದೇವಸ್ಥಾನದ ಬಳಿ ದೀಪಾವಳಿ ಹಬ್ಬವನ್ನು ಸೊಪ್ಪು ಕಂತೆಯೊಂದಿಗೆ ಲಕ್ಯೋ ಲಕ್ಯೋ ಎಂದು ಕೂಗುತ್ತಾ ಸಂಭ್ರಮಿಸಿದರು 
ಆಲೂರು ತಾಲ್ಲೂಕು ಮುರುಡೂರು ಗ್ರಾಮದ ದೇವಸ್ಥಾನದ ಬಳಿ ದೀಪಾವಳಿ ಹಬ್ಬವನ್ನು ಸೊಪ್ಪು ಕಂತೆಯೊಂದಿಗೆ ಲಕ್ಯೋ ಲಕ್ಯೋ ಎಂದು ಕೂಗುತ್ತಾ ಸಂಭ್ರಮಿಸಿದರು    

ಆಲೂರು: ‘ದಿಕ್ಕಿಲ್ಲದ ದೀಪಾವಳಿ’ ಎಂದೇ ಖ್ಯಾತಿ ಹೊಂದಿರುವ ದೀಪಾವಳಿ ಹಬ್ಬವನ್ನು, ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವಂತೆ ಪ್ರತಿಯೊಂದು ಗ್ರಾಮಗಳಲ್ಲಿ ಸ್ಥಳೀಯ ಧಾರ್ಮಿಕ ವಿಧಿಗಳಂತೆ ಆಚರಿಸಲಾಗುತ್ತಿದೆ. ಅಮಾವಾಸ್ಯೆಗೆ ಮೂರು ದಿನಗಳ ಮೊದಲಿಂದಲೂ ಶುರುವಾಗುವ ಹಬ್ಬ, ಹುಣ್ಣಿಮೆವರೆಗೆ 15 ದಿನಗಳ ಕಾಲ ವಿಶಿಷ್ಟವಾಗಿ ನಡೆಯುತ್ತದೆ.

ಮಂಗಳವಾರ ಅಮಾವಾಸ್ಯೆ ಇರುವುದರಿಂದ ಮೂರು ದಿನಗಳ ಮೊದಲು ಅಂದರೆ, ಭಾನುವಾರ ಹಬ್ಬ ಮಾಡಬೇಕಾಗುತ್ತದೆ. ವಿಶೇಷವಾಗಿ ಗುರುವಾರ ಮತ್ತು ಭಾನುವಾರ ಜಮೀನಿಗೆ ಸೊಪ್ಪು ಹಾಕುವುದಿಲ್ಲ. ಈ ಕಾರಣದಿಂದ ಶನಿವಾರ ಹಬ್ಬ ಆಚರಣೆ ಮಾಡಿದರು.

ಮಲೆನಾಡು ಅಂಚಿನಲ್ಲಿರುವ ಕೆಳನಾಡು ಎಂದು ಕರೆಯುವ ಬೆಳಮೆ, ಕಡದರವಳ್ಳಿ, ಚಿಕ್ಕೋಟೆ, ಮಂಜಲಗೂಡು, ಬೆಳಗೋಡು, ಈಶ್ವರಹಳ್ಳಿ, ಮೂಗಲಿ, ಹುಲ್ಲಹಳ್ಳಿ, ಕೆರೆಹಳ್ಳಿ, ಕಡಗರವಳ್ಳಿ, ಮುರುಡೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಿದರು.

ADVERTISEMENT

ಹಬ್ಬದ ಹಿಂದಿನ ರಾತ್ರಿ ಯುವಕರು ತಂಡೋಪತಂಡವಾಗಿ ಊರಿನ ದೇವಾಲಯ, ರಸ್ತೆಗಳಲ್ಲಿ, ಕುಂಬಾರರ ಮನೆಯಿಂದ ತಂದಿದ್ದ ಆವಿಗೆ ಬೂದಿಯಿಂದ, ಸೂರ್ಯ, ಚಂದ್ರಾಕೃತಿಗಳನ್ನು ಬರೆಯುತ್ತಿದ್ದರು. ಕುಂಬಾರರ ವೃತ್ತಿ ಚಟುವಟಿಕೆ ಕಡಿಮೆಯಾಗಿರುವ ಕಾರಣದಿಂದ ಈ ಕಾರ್ಯಕ್ಕೆ ತೆರೆ ಬಿದ್ದಿದೆ.

ಹಬ್ಬದ ದಿನ ಪ್ರತಿಯೊಬ್ಬರೂ ಜಮೀನಿಗೆ ತೆರಳಿ ಪೂಜೆ ಸಲ್ಲಿಸಿ, ಲಕ್ಯೋ ಲಕ್ಯೋ ಎಂದು ಕೂಗಿದರು. ಮನೆಗೆ ಹಿಂದಿರುಗುವಾಗ ಬೂದುಕುಂಬಳ ಬಳ್ಳಿ ಸೇರಿದಂತೆ ಅನೇಕ ಕಾಡು ಜಾತಿ ಸೊಪ್ಪುಗಳನ್ನು ಕಂತೆ ಮಾಡಿಕೊಂಡು ಗ್ರಾಮದ ದೇವಸ್ಥಾನದ ಬಳಿ ಒಟ್ಟುಗೂಡುತ್ತಾರೆ. ಎಲ್ಲರೂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕೂಗು ಹಾಕುತ್ತಾ ಸಂಭ್ರಮಿಸಿ ಮನೆಗೆ ಹಿಂದಿರುಗುತ್ತಾರೆ.

ದೀಪಾವಳಿ ಹಬ್ಬದಲ್ಲಿ ವಿಶೇಷ ಅಡುಗೆಯೆಂದರೆ, ದೋಸೆ, ಸೋರೆಕಾಯಿ ಪಲ್ಯೆ, ಒಬ್ಬಟ್ಟು, ಪಾಯಸ ಮಾಡಿದರು. ಮನೆಯಲ್ಲಿ ಹಬ್ಬದ ಊಟ ಸವಿದ ನಂತರ ತಮ್ಮ ಮನೆಯಲ್ಲಿರುವ ಜಾನುವಾರುಗಳನ್ನು ಸಮೀಪದ ಕೆರೆಗಳಲ್ಲಿ ಹೀಜು ಹಾಕಿ, ದೋಸೆ ಹಿಟ್ಟು ಅಂಬಳಿಗೆಯನ್ನು ಮೈಮೇಲೆ ಹಚ್ಚುವ ಮೂಲಕ ಹಬ್ಬಕ್ಕೆ ನಾಂದಿ ಹಾಡಿದರು.

ದೀಪಾವಳಿ ಕೃಷಿಕರು ಜಾನುವಾರು ಮತ್ತು ಜಮೀನಿಗೆ ಸಂಬಂಧಿಸಿದ ಹಬ್ಬ. ಮುಂದಿನ ದಿನಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ಹಬ್ಬ ಸೀಮಿತವಾಗುವುದರಲ್ಲಿ ಸಂದೇಹವಿಲ್ಲ.
ಎಸ್. ಎಸ್. ಶಿವಮೂರ್ತಿ ಮುರುಡೂರು ಗ್ರಾಮದ ಕೃಷಿಕ
ರಾಸಾಯನಿಕ ಬಳಸಿ ಕೃಷಿ ಚಟುವಟಿಕೆ ನಡೆಯುತ್ತಿದ್ದು ಯುವಜನರು ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಹಬ್ಬಗಳ ವಿಶೇಷತೆ ಮರೆಯಾಗುತ್ತಿದೆ.
ಎಂ.ಎಸ್. ಮಹೇಶ್ ಆಲೂರು ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.