
ಹಾಸನ: ಕ್ರಿಸ್‌ಮಸ್ ಹಾಗೂ ಹೊಸವರ್ಷದ ಆಚರಣೆಗಾಗಿ ಬೆಂಗಳೂರಿನಿಂದ ಮಂಗಳೂರು, ಮಡಿಕೇರಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳತ್ತ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಸಾಲು ಸಾಲು ರಜೆ ಇರುವುದರಿಂದ ಒಂದೇ ವೇಳೆ ನೂರಾರು ವಾಹನಗಳು ರಸ್ತೆಗೆ ಇಳಿದ ಪರಿಣಾಮ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಗುರುವಾರ ಭಾರಿ ವಾಹನ ದಟ್ಟಣೆ ಉಂಟಾಗಿತ್ತು. ಹಿರಿಸಾವೆ, ಕುಣಿಗಲ್, ಶಾಂತಿಗ್ರಾಮ ಹಾಗೂ ಬೈರಾಪುರ ಟೋಲ್‌ಗೇಟ್‌ಗಳಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬಂದವು.
ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿ, ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವಂತಾಗಿತ್ತು. ಪ್ರಯಾಣಿಕರು ಗಂಟೆಗಳ ಕಾಲ ರಸ್ತೆಯಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಸಂಚಾರವನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದು, ಪ್ರಯಾಣಿಕರು ಸಹನೆ ವಹಿಸಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಗುರುವಾರ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ, ನೌಕರರು ಶುಕ್ರವಾರ ಒಂದು ದಿನ ರಜೆ ಪಡೆದಲ್ಲಿ ಡಿ.28ರವರೆಗೆ ಸತತ ನಾಲ್ಕು ದಿನ ರಜೆ ದೊರೆಯಲಿದೆ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು ಬೆಂಗಳೂರು, ಮೈಸೂರು ಸೇರಿದಂತೆ ನಾನಾ ಜಿಲ್ಲೆಗಳಿಂದ ಮಲೆನಾಡು ಭಾಗವಾದ ಚಿಕ್ಕಮಗಳೂರು, ಮಡಿಕೇರಿ, ಸಕಲೇಶಪುರ ಸೇರಿದಂತೆ ಇತರೆಡೆಗೆ ಪ್ರವಾಸ ಹೊರಟಿದ್ದಾರೆ.
ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ನಿತ್ಯಕ್ಕಿಂತ ಹೆಚ್ಚಾಗಿತ್ತು. ಬೆಂಗಳೂರಿಗೆ ಸಂಚರಿಸುವ ವಾಹನಗಳಿಗಿಂತ ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳ ಸಂಖ್ಯೆ ಬುಧವಾರ ಮಧ್ಯರಾತ್ರಿಯಿಂದಲೇ ಏರಿಕೆ ಕಂಡಿದೆ.
ಹೋಟೆಲ್‌ಗಳಲ್ಲಿ ಭರ್ಜರಿ ವ್ಯಾಪಾರ: ಬುಧವಾರ ರಾತ್ರಿಯಿಂದಲೇ ಹೆದ್ದಾರಿ ಪಕ್ಕದ ಹೋಟೆಲ್‌ಗಳಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ. ಗುರುವಾರ ಬೆಳಿಗ್ಗೆಯಿಂದಲೇ ಸರದಿಯಲ್ಲಿ ಬರುತ್ತಿದ್ದ ವಾಹನಗಳು, ರಸ್ತೆ ಪಕ್ಕದ ಹೋಟೆಲ್‌ಗಳಲ್ಲಿ ನಿಂತಿದ್ದವು. ಕೆಲ ಹೋಟೆಲ್‌ಗಳಲ್ಲಿ ಪಾರ್ಕಿಂಗ್‌ಗೂ ಜಾಗವಿಲ್ಲದೇ ವಾಹನ ಚಾಲಕರು, ಮುಂದಿನ ಹೋಟೆಲ್‌ಗೆ ತೆರಳುತ್ತಿದ್ದರು.
ಇನ್ನು ಸಕಲೇಶಪುರ ತಾಲ್ಲೂಕಿನ ರೆಸಾರ್ಟ್‌ಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಬೇಲೂರು ರಸ್ತೆಯಲ್ಲಿಯೂ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.