ADVERTISEMENT

ಆಲೂರು: ಸುಸಜ್ಜಿತ ನಿಲ್ದಾಣವಿದ್ದರೂ ನಿಲ್ಲದ ರೈಲು, ದಶಕಗಳ ಹೋರಾಟಕ್ಕೆ ನ್ಯಾಯವಿಲ್ಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 4:41 IST
Last Updated 1 ಫೆಬ್ರುವರಿ 2021, 4:41 IST
ಆಲೂರು ರೈಲ್ವೆ ನಿಲ್ದಾಣ
ಆಲೂರು ರೈಲ್ವೆ ನಿಲ್ದಾಣ   

ಆಲೂರು: ಮಲೆನಾಡು ಪ್ರದೇಶ ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ರೈಲು ನಿಲ್ದಾಣವಿದ್ದರೂ ರೈಲು ನಿಲುಗಡೆಯಾಗುತ್ತಿಲ್ಲ. ರೈಲು ನಿಲುಗಡೆಗೆ ವ್ಯವಸ್ಥೆ ಮಾಡಬೇಕೆಂಬ ದಶಕಗಳ ಹೋರಾಟಕ್ಕೆ ಮನ್ನಣೆ ದೊರೆತಿಲ್ಲ.

ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ಯಾಸೆಂಜರ್‌ ಹಾಗೂ ಎಕ್ಸ್‌ಪ್ರೆಸ್
ರೈಲು ಈ ಮಾರ್ಗದಲ್ಲಿಯೇ ಸಂಚರಿಸುತ್ತವೆ. ಆದರೆ ಆಲೂರಿನಲ್ಲಿ ಒಂದೂ ನಿಲುಗಡೆ ನೀಡದಿರುವುದು ಸಾರ್ವಜನಿಕರ ಅಸಮಾಧಾನ ಉಂಟು ಮಾಡಿದೆ.

ಮೀಟರ್ ಗೇಜ್ ಮಾರ್ಗವನ್ನು 1996 ರಲ್ಲಿ ಬ್ರಾಡ್ ಗೇಜ್‍ಗೆ ಪರಿವರ್ತಿಸಲಾಯಿತು. ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಹೋಗುವ ಪ್ರಯಾಣಿಕರು ಹಾಸನ ಅಥವಾ ಸಕಲೇಶಪು ರೈಲು ನಿಲ್ದಾಣ ಅವಲಂಬಿಸುವಂತಾಗಿದೆ.

ADVERTISEMENT

ತಾಲ್ಲೂಕಿನಲ್ಲಿ 260 ಗ್ರಾಮಗಳಿದ್ದು, ಜನಸಂಖ್ಯೆ ಒಂದು ಲಕ್ಷ ಇದೆ. ಬೆಂಗಳೂರು, ಮಂಗಳೂರು,
ಕಾರವಾರ, ಕಣ್ಣೂರು ಕಡೆಯಿಂದ ಪ್ಯಾಸೆಂಜರ್‌, ಎಕ್ಸ್‌ಪ್ರೆಸ್‌ ರೈಲು ಸಾಗುತ್ತವೆ. ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನ, ಸಿಮೆಂಟ್‌ ಸಾಗಣೆ ಮಾಡುವ ಗೂಡ್ಸ್‌ ರೈಲುಗಳು ಸಂಚರಿಸುತ್ತಿವೆ.

ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು, ಏಲಕ್ಕಿ, ಭತ್ತ, ಶುಂಠಿ, ಜೋಳ, ಆಲೂಗೆಡ್ಡೆ ಬೆಳೆಯುತ್ತಿದ್ದು,
ಅವುಗಳನ್ನು ಲಾರಿಗಳಲ್ಲಿ ಮಾರುಕಟ್ಟೆಗೆ ಸಾಗಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೇ ಬೆಳೆಗಳನ್ನು
ಸಾಗಿಸಲು ಹೆಚ್ಚಿನ ವಾಹನ ಬಾಡಿಗೆ ನೀಡಿ ನಷ್ಟ ಹೊಂದಬೇಕಾಗಿದೆ.

ರೈಲು ನಿಲ್ದಾಣ ಪಟ್ಟಣದಿಂದ 1 ಕಿ.ಮೀ. ದೂರದ ಹಂತನಮನೆ ಬಳಿ ಇದೆ. ನಿಲ್ದಾಣಕ್ಕೆ ಹೋಗಲು
ಉತ್ತಮ ರಸ್ತೆ ಇದೆ. ಮಂಗಳೂರು, ಕಾರವಾರ, ಸುಬ್ರಹ್ಮಣ್ಯ, ಧರ್ಮಸ್ಥಳ ಹಾಗೂ ಬೆಂಗಳೂರು
ಪ್ರವಾಸಕ್ಕೆ ರೈಲು ಪ್ರಯಾಣ ಹೆಚ್ಚು ಅನುಕೂಲವಾಗಿದೆ. ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡುವ
ಅವಕಾಶ ಈ ಭಾಗದ ಜನರಿಗೆ ಇನ್ನೂ ದೊರೆತಿಲ್ಲ.

ರೈಲು ನಿಲುಗಡೆಗೆ ಆಗ್ರಹಿಸಿ ಜನಪ್ರತಿನಿದಿಗಳು, ಸಂಘ ಸಂಸ್ಥೆಗಳು, ನಾಗರಿಕರು ಹಲವು ಬಾರಿ
ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದರೂ ಬೇಡಿಕೆ ಮಾತ್ರ ಈಡೇರಿಲ್ಲ.
ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡ, ಸಂಸದ ಪ್ರಜ್ವಲ್ ರೇವಣ್ಣ ಸಹ ಕೇಂದ್ರ ರೈಲ್ವೆ ಸಚಿವರಿಗೆ
ಪತ್ರ ಬರೆದು ಮನವಿ ಮಾಡಿದ್ದಾರೆ.

‘ಸಂಸದರಾಗಿದ್ದಎಚ್.ಡಿ. ದೇವೇಗೌಡರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ರೈಲು ನಿಲುಗಡೆಗೆ ಕೋರಿದ್ದರು. ಬೆಂಗಳೂರಿನಲ್ಲಿ ನಡೆದ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ. ರೈಲು ನಿಲುಗಡೆ ಮಾಡುವಂತೆ ಮತ್ತೊಮ್ಮೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗುವುದು’ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

‘ರೈಲು ನಿಲ್ಲಿಸಬೇಕು’

ಹಾಸನ: ಆಲೂರು ತಾಲ್ಲೂಕು ಕೇಂದ್ರದ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಇಲಾಖೆ
ಅಧಿಕಾರಿಗಳು ಕ್ರಮವಹಿಸಬೇಕು. ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆ ನಿರ್ವಹಣೆ
ಕೊರತೆಯಿರುವುದನ್ನು ಶಾಸಕ ಎಚ್‌.ಕೆ.ಕುಮಾರಸ್ವಾಮಿ ಗಮನಕ್ಕೆ ತಂದು ಶೀಘ್ರವಾಗಿ ಕ್ರಮ
ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಚಿಕ್ಕಮಗಳೂರು, ಬೇಲೂರು, ಆಲೂರು ರೈಲ್ವೆ ಮಾರ್ಗ
ನಿರ್ಮಾಣಕ್ಕೆ 564 ಎಕರೆ ಭೂ ಸ್ವಾಧೀನಪಡಿಸಿ ತ್ವರಿತವಾಗಿ ಮುಗಿಸಿ ಕಾಮಗಾರಿ ಆರಂಭಿಸಬೇಕು. ದಶಕಗಳಿಂದ ಆಲೂರು ಜನತೆ ರೈಲು ನಿಲುಗಡೆಗೆ ಮನವಿ ಮಾಡುತ್ತಲೇ ಇದ್ದಾರೆ. ರೈಲು ನಿಲುಗಡೆಯಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಪ್ರಯಾಣಿಸಲು ಅನುಕೂಲವಾಗುತ್ತದೆ. ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಹಲವು ಬಾರಿ ಪತ್ರ ತರಲಾಗಿದೆ.

- ಪ್ರಜ್ವಲ್ ರೇವಣ್ಣ, ಸಂಸದ

***

ನಿಲುಗಡೆ ಕೋರಿ ರೈಲ್ವೆ ಮೇಲಧಿಕಾರಿ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ.ರೈಲು ನಿಲುಗಡೆಯಾದರೆ ಪ್ರವಾಸಿ ಸ್ಥಳ ಹಾಗೂ ರಾಜಧಾನಿಗೆ ಹೋಗಲು ಸಾಕಷ್ಟುಅನುಕೂಲವಾಗಲಿದೆ

- ಲೋಕೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯ

***

ತರಕಾರಿ, ಸೊಪ್ಪು ಇತರೆ ಆಹಾರ ಪದಾರ್ಥಗಳನ್ನು ಹೊರ ಜಿಲ್ಲೆಗಳಲ್ಲಿ ಮಾರಾಟ ಮಾಡಿದರೆ ಅಧಿಕಲಾಭ ಗಳಿಸಬಹುದು. ರೈಲು ನಿಲುಗಡೆಯಾದರೆ ಸಾಕಷ್ಟು ಅನುಕೂಲವಾಗಲಿದೆ.

- ಸ್ವಾಮಿಗೌಡ, ಕೃಷಿಕ, ಹಂತನಮನೆ

***

ಬ್ರಾಡ್ ಗೇಜ್ ಆದ ನಂತರ ರೈಲು ನಿಲುಗಡೆಯಾಗುತ್ತಿಲ್ಲ. ರಾಜ್ಯಸಭಾ ಸದಸ್ಯ ಎಚ್. ಡಿ.ದೇವೇಗೌಡ, ಸಂಸದ ಪ್ರಜ್ವಲ್ ರೇವಣ್ಣ ಅವರು ಗಮನ ಹರಿಸಿ ರೈಲು ನಿಲುಗಡೆಗೆ ಸಹಕರಿಸಬೇಕು.

- ಕೆ. ಎಸ್. ಮಂಜೇಗೌಡ, ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ

***

ಪುಣ್ಯ ಕ್ಷೇತ್ರ, ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಹೋಗಿ ಬರಬೇಕಾದರೆ ಕುಟುಂಬ ಸಮೇತ ಬಸ್‌ನಲ್ಲಿಯೇ ಪ್ರಯಾಣ ಮಾಡಬೇಕು. ರೈಲು ಪ್ರಯಾಣ ಕಡಿಮೆ ವೆಚ್ಚ ಮತ್ತು ಆಯಾಸವಾಗುವುದಿಲ್ಲ.

- ವೇದಾ ಸುರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ

***

ಶಿಕ್ಷಕಿಯಾಗಿರುವ ನಾನು ಅರಸೀಕೆರೆ ತಾಲ್ಲೂಕಿನಲ್ಲಿರುವ ನನ್ನ ಊರಿಗೆ ಬಸ್‌ನ
ಲ್ಲಿಯೇ ಪ್ರಯಾಣಿಸಬೇಕು. ರೈಲು ನಿಲ್ದಾಣವಿದ್ದರೂ ಜನರಿಗೆ ಉಪಯೋಗವಾಗುತ್ತಿಲ್ಲ

- ಪ್ರಭಾವತಿ, ಶಿಕ್ಷಕಿ, ಆಲೂರು

***

ತಾಲ್ಲೂಕು ಕೇಂದ್ರದಲ್ಲಿ ರೈಲು ನಿಲುಗಡೆ ಮಾಡುವಂತೆ ಸಂಬಂಧಪಟ್ಟ ಸಚಿವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ದೇವೇಗೌಡರು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ.

- ಎಚ್‌.ಕೆ.ಕುಮಾರಸ್ವಾಮಿ, ಸಕಲೇಶಪುರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.