ADVERTISEMENT

ತೃತೀಯ ಲಿಂಗಿಗಳ ಪ್ರತಿಭಟನೆ

ಟ್ರಾನ್ಸ್ ಜೆಂಡರ್ ಮಸೂದೆ ಹಿಂಪಡೆಯುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 15:27 IST
Last Updated 24 ಡಿಸೆಂಬರ್ 2018, 15:27 IST
ಹಾಸನ ಜಿಲ್ಲಾಧಿಕಾರಿ ಕಚೇರಿಯ ಅಂಬೇಡ್ಕರ್ ಪ್ರತಿಮೆ ಎದುರು ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿಯ ಅಂಬೇಡ್ಕರ್ ಪ್ರತಿಮೆ ಎದುರು ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದರು.   

ಹಾಸನ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಟ್ರಾನ್ಸ್ ಜೆಂಡರ್’ ಬಿಲ್ ಅನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದರು.

‘ಲೋಕಸಭೆಯಲ್ಲಿ ಟ್ರಾನ್ಸ್ ಜೆಂಡರ್ ಬಿಲ್ ಅನ್ನು 27 ತಿದ್ದುಪಡಿಗಳ ಸಮೇತ ಅನುಮೋದಿಸಲಾಗಿದೆ. ಇದರಲ್ಲಿರುವ ಅಂಶಗಳು ನಮ್ಮ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಸಂವಿಧಾನ ನೀಡಿರುವ ತೃತೀಯ ಲಿಂಗಿಗಳ ಸಮಾನತೆ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಲೈಂಗಿಕ ಅಲ್ಪಸಂಖ್ಯಾತರು ಭಿಕ್ಷೆ ಬೇಡುವುದು ಅಪರಾಧ ಎನ್ನಲಾಗುತ್ತಿದೆ. . ನಮ್ಮಿಂದಲೇ ಎಚ್ ಐವಿ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ ಎಂಬುದು ಸುಳ್ಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಲಂ 370 ಹಾಗೂ 370ಎ ಅಡಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಇದನ್ನು ಈ ಬಿಲ್ ನಲ್ಲಿ ಸೇರಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರಲ್ಲಿನ ನೀತಿಗಳು ದೋಷಪೂರಿತವಾಗಿದೆ. ಲೈಂಗಿಕ ಕಾರ್ಮಿಕರನ್ನು ‘ದಾಳಿ ಹಾಗೂ ರಕ್ಷಣೆ’ ಎಂಬ ಮಾದರಿಯ ಮೂಲಕ ಪುನರ್ವಸತಿ ಕೇಂದ್ರಗಳಲ್ಲಿ ಅತ್ಯಧಿಕ ಸಮಯ ಇರಿಸಬಹುದು’ ಎಂದರು.

‘ತೃತೀಯ ಲಿಂಗಿಗಳಿಗೆ ಮೊದಲು ಶಿಕ್ಷಣದಲ್ಲಿಮೀಸಲಾತಿ ನೀಡಬೇಕು. ಉತ್ತಮ ಶಿಕ್ಷಣದ ಜತೆಗೆ ಉದ್ಯೋಗ ಮೀಸಲಾತಿ ಹಾಗೂ ಆರೋಗ್ಯ ಸೇವೆ ಒದಗಿಸಬೇಕು. ಈ ಮಸೂದೆ ಲೈಂಗಿಕ ಅಲ್ಪಸಂಖ್ಯಾತರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಇದನ್ನು ವಾಪಸ್ ಪಡೆಯದಿದ್ದರೆ ರಾಷ್ಟ್ರ ವ್ಯಾಪಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಕೃತಿ ಸಮುದಾಯ ಸೇವಾ ಸಂಸ್ಥೆಯ ಅಧ್ಯಕ್ಷೆ ವರ್ಷಾ, ಅಶ್ವಥ್‌, ಜಾಹ್ನವಿ, ಶೋಭಾ, ರಾಜೀವ್, ದಲಿತ ಮುಖಂಡರಾದ ನಾಗರಾಜ್ ಹೆತ್ತೂರು, ಮರಿಜೋಸೆಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.