ಅಪಘಾತ
–ಪ್ರಾತಿನಿಧಿಕ ಚಿತ್ರ
ಚನ್ನರಾಯಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ಕಗ್ಗಲಿಕಾವಲು ಬಳಿ ಇನ್ನೋವ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ನಗರದ ಬಸವರಾಜು (20), ಅನುಶ್ರೀ (20) ಮೃತಪಟ್ಟವರು. ಅನುಶ್ರೀ ಸೋದರ ಸಂಬಂಧಿ ಛಾಯಾ ಗಾಯಗೊಂಡಿದ್ದಾರೆ. ಮತ್ತೊಂದು ಬೈಕಿನಲ್ಲಿದ್ದ ಚನ್ನರಾಯಪಟ್ಟಣದ ಮಹಮದ್ ಶಾಹಿದ್ ಸಹ ಗಾಯಗೊಂಡಿದ್ದಾರೆ.
ಬಸವರಾಜು, ಅನುಶ್ರೀ ಮತ್ತು ಛಾಯಾ ಅವರು ಕುಶಾಲನಗರದಲ್ಲಿರುವ ಗೋಲ್ಡನ್ ಟೆಂಪಲ್ ವೀಕ್ಷಿಸಿ ಬೆಂಗಳೂರಿಗೆ ಬೈಕಿನಲ್ಲಿ ಹಿಂದಿರುಗುತ್ತಿದ್ದರು. ಅದೇ ಸಂದರ್ಭದಲ್ಲಿ ಬೆಂಗಳೂರು ಕಡೆಯಿಂದ ಮಡಿಕೇರಿ ನಗರಕ್ಕೆ ತೆರಳುತ್ತಿದ್ದ ಇನ್ನೋವ ಕಾರು ಬೈಕಿಗೆ ಹೊಡೆದಿದೆ. ನಿಯಂತ್ರಣ ಕಳೆದುಕೊಂಡ ಕಾರು ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದಾಗ ಈ ಬೈಕಿನಲ್ಲಿದ್ದ ಮಹಮದ್ ಶಾಹೀದ್ ಅವರಿಗೆ ಗಾಯವಾಗಿದೆ.
ಛಾಯಾ ಅವರಿಗೆ ಚನ್ನರಾಯಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.