ADVERTISEMENT

ಹಾಸನ | ಕೈಗಾರಿಕೆಗಳಿಗೆ ಸಿಗದ ಭೂಮಿ, ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 5:48 IST
Last Updated 28 ಆಗಸ್ಟ್ 2023, 5:48 IST
ಹೊಳೆನರಸೀಪುರ ಬಳಿ ಇರುವ ತೆಂಗು ನಾರು ಘಟಕ.
ಹೊಳೆನರಸೀಪುರ ಬಳಿ ಇರುವ ತೆಂಗು ನಾರು ಘಟಕ.    

ಹಾಸನ: ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಕ್ತ ಅವಕಾಶಗಳಿದ್ದರೂ ಸರಿಯಾದ ಮಾರ್ಗದರ್ಶನ ಹಾಗೂ ಕೈಗಾರಿಕೆ ಸ್ಥಾಪನೆಗೆ ಅಗತ್ಯ ಭೂಮಿ ಕೊರತೆ ಎದ್ದು ಕಾಣುತ್ತಿದೆ.

ಸಣ್ಣ ಕೈಗಾರಿಕೆ ಅಡಿಯಲ್ಲಿ ಸೊಪ್ಪು ಮಾರುವವರಿಂದ ಹಿಡಿದು ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಪ್ರಾರಂಭಿಸುವ ಕೈಗಾರಿಕೆಗಳು ಸೇರಿವೆ. ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಮೂಲಕ 50ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗವನ್ನು ಪಡೆದಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಸಣ್ಣ ಕೈಗಾರಿಕಾ ನೋಂದಣಿ ಮಾಡಿಕೊಂಡಿದ್ದಾರೆ. ₹ 1 ಕೋಟಿಯಿಂದ ₹ 250 ಕೋಟಿವರೆಗೂ ಸಾಲವನ್ನು ಪಡೆದು ಉದ್ಯಮಗಳನ್ನು ಸ್ಥಾಪಿಸಬಹುದಾಗಿದೆ.

ಎಂಎಸ್‌ಎಂಇ (ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಾಗಿ) ವಿಂಗಡಿಸಲಾಗುತ್ತದೆ. ಜಿಲ್ಲೆಯಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ 12 ದೊಡ್ಡ ಕೈಗಾರಿಕೆ, 18 ಮಧ್ಯಮ ಹಾಗೂ 20ಸಾವಿರಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳಿವೆ ಎಂದು ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಜಿ.ಜಿ. ರಾಜಶೇಖರ್ ತಿಳಿಸಿದ್ದಾರೆ.

ADVERTISEMENT

ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಆನ್‌ಲೈನ್‌ ಮೂಲಕ ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಂತರ ಅರ್ಜಿಯನ್ನು ಪರಾಮರ್ಶಿಸಿ ವರದಿಯನ್ನು ಇಲಾಖೆಯಿಂದ ನೀಡಲಾಗುತ್ತದೆ ಎಂದು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಜು ಹೇಳುತ್ತಾರೆ.

ನಂತರ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಸಾಲದ ಹಣ ನೇರ ನಗದು ರೂಪದಲ್ಲಿಯೇ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಉದ್ಯಮ ನಡೆಯುತ್ತಿರುವ ಹಾಗೂ ಮುಂದಿನ ಬೆಳವಣಿಗೆ ಬಗ್ಗೆ ಕಾಲಕಾಲಕ್ಕೆ ಇಲಾಖೆ ಹಾಗೂ ಬ್ಯಾಂಕ್‌ನಿಂದ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಸಣ್ಣ ಕೈಗಾರಿಕೆಗಳಲ್ಲಿ ಸೇವಾ ಉದ್ಯಮ, ಉತ್ಪಾದನೆ ಘಟಕ, ವ್ಯಾಪಾರ ಎಲ್ಲಾ ವಿಭಾಗಗಳು ಸೇರುತ್ತವೆ. ₹ 1 ಕೋಟಿ ವರೆಗೆ ಸಾಲ ಪಡೆದು ಪ್ರಾರಂಭಿಸುವ ಉದ್ದಿಮೆಯೂ ಸಣ್ಣ ಕೈಗಾರಿಕೆ ವ್ಯಾಪ್ತಿಗೆ ಬರುತ್ತದೆ. ಸಣ್ಣ ಕೈಗಾರಿಕೆಯಲ್ಲಿ ತೊಡಗಿಕೊಳ್ಳಲು ಯುವಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಆಯೋಜಿಸಲಾಗುತ್ತಿದೆ ಎಂದು ಹೇಳುತ್ತಾರೆ ಸಿದ್ದರಾಜು.

ಉದ್ದಿಮೆ ಸ್ಥಾಪನೆ ಮಾಡಲು ಸರ್ಕಾರದಿಂದ ಸಬ್ಸಿಡಿಯು ದೊರೆಯುತ್ತಿದ್ದು, ಕೈಗಾರಿಕೆ ಬಳಸುವ ವಿದ್ಯುತ್‌ನಲ್ಲಿಯೂ ಪ್ರತಿ ಯೂನಿಟ್‌ಗೆ ಇಂತಿಷ್ಟು ರಿಯಾಯಿತಿ ನೀಡಲಾಗುತ್ತದೆ. ಮಹಿಳೆಯರಿಗೆ, ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಇತರೆ ವರ್ಗಗಳಿಗೂ ಬಂಡವಾಳ ಹೂಡಿಕೆಗೆ ಸಹಾಯಧನ ದೊರೆಯುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಹಲವು ಅವಕಾಶಗಳಿದ್ದು, ಹಾಸನದಿಂದ- ಬೆಂಗಳೂರಿಗೆ ತಲುಪಲು ಕೇವಲ ಎರಡೂವರೆ ಗಂಟೆ ತಗುಲುತ್ತದೆ. ಇಂತಹ ಜಿಲ್ಲೆಗಳನ್ನು ಗುರುತಿಸಿ ಸರ್ಕಾರ ಹೆಚ್ಚು ಕೈಗಾರಿಕಾ ವಲಯ ಸ್ಥಾಪನೆಗೆ ಮುಂದಾಗಬೇಕು ಎನ್ನುವುದು ಉದ್ಯಮಿಗಳ ಬೇಡಿಕೆ.

ಹೋಟೆಲ್ ನಡೆಸುವುದು ಸಹ ಸಣ್ಣ ಉದ್ಯಮವಾಗಿದೆ. ಉದ್ಯಮಕ್ಕೆ ವಸ್ತುಗಳನ್ನು ಸರಬರಾಜು ಮಾಡುವ ಹತ್ತಾರು ಲಾರಿಗಳಿಂದ ನೂರಾರು ಮಂದಿ ಉದ್ಯೋಗ ಪಡೆಯುತ್ತಾರೆ. ಚಾಲಕನಿಂದ ಹಿಡಿದು ವಸ್ತುಗಳನ್ನು ಪಡೆಯುವ ಹಾಗೂ ಸರಬರಾಜು ಮಾಡುವ ವ್ಯಾಪಾರಿಗಳನ್ನು ಒಳಗೊಂಡಂತೆ ಎಲ್ಲರೂ ಇದರ ವ್ಯಾಪ್ತಿಗೆ ಬರುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಿದ್ದು, ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸುವ ಅಗತ್ಯತೆ ಹೆಚ್ಚಿದೆ. ಕೈಗಾರಿಕಾ ಇಲಾಖೆ ಅಧಿಕಾರಿಗಳು ಸಹ ಕಾಲಕಾಲಕ್ಕೆ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಯುವಕರನ್ನು ಕೈಗಾರಿಕೆ ಸ್ಥಾಪನೆಗೆ ಉತ್ತೇಜಿಸಬೇಕಿದೆ ಎನ್ನುತ್ತಾರೆ ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎ. ಕಿರಣ್‌.

ಇಲಾಖೆಗಳಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿ ಕೊರತೆಯು ಹೆಚ್ಚಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ಹಲವು ಉದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಸಹ ಕೈಗಾರಿಕಾ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ಕೆಲಸ ಮಾಡಲಿದ್ದಾರೆ ಎಂಬ ನಂಬಿಕೆಯನ್ನು ಈಗ ಉದ್ಯಮಿಗಳು ಹೊಂದಿದ್ದಾರೆ.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ‘ಸ್ವಉದ್ಯೋಗವೇ ನಿರುದ್ಯೋಗ ಸಮಸ್ಯೆಗೆ ಪರಿಹಾರ’ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮ ಜಾರಿಯಲ್ಲಿದ್ದು. ಪಿಎಂಇಜೆಪಿ, ಪಿಎಂಜಿಪಿ ಸೇರಿದಂತೆ ಅನೇಕ ಯೋಜನೆಗಳು ಜಾರಿಯಲ್ಲಿದೆ.

ಈ ಯೋಜನೆಗಳಿಗೆ ಆನ್‌ಲೈನ್ ಹಾಗೂ ನೇರ ಅರ್ಜಿ ಸಲ್ಲಿಸುವ ಮೂಲಕ ಫಲಾನುಭವಿಗಳು ಅನುಕೂಲ ಪಡೆಯಬಹುದಾಗಿದೆ. ಸಾಂಪ್ರದಾಯಿಕ, ಖನಿಜಾಧಾರಿತ, ಅರಣ್ಯಾಧಾರಿತ, ಸೇವಾ ಉದ್ದಿಮೆಗಳು, ಎಂಜಿನಿಯರಿಂಗ್ ಮತ್ತು ಅಸಂಪ್ರದಾಯಿಕ ಶಕ್ತಿ ಸೇರಿದಂತೆ ನಾನಾ ವಲಯಗಳಲ್ಲಿ ಯೋಜನೆ ಲಾಭ ಪಡೆಯಬಹುದಾಗಿದೆ. ಇಂತಿಷ್ಟು ಸಾಲದೊಂದಿಗೆ ಸಬ್ಸಿಡಿ ಸೌಲಭ್ಯವು ಅನೇಕ ಯೋಜನೆಗಳಿಗೆ ಇದೆ.

ಅರಕಲಗೂಡು ತಾಲ್ಲೂಕಿನಲ್ಲಿ ಅಡಿಕೆ ಹಾಳೆಯಿಂದ ತಟ್ಟೆ, ಬಟ್ಟಲು ತಯಾರಿಸುವ ಘಟಕಗಳು, ಅಕ್ಕಿ ಗಿರಣಿ, ಬೇಕರಿಗಳಂತಹ ಉದ್ಯಮಗಳನ್ನು ಹೊರತುಪಡಿಸಿ, ಹೆಸರಿಸಬಹುದಾದ ಯಾವುದೇ ಪ್ರಮುಖ ಸಣ್ಣ ಕೈಗಾರಿಕೆಗಳೂ ಇಲ್ಲ. ಕೇರಳಾಪುರ ಗ್ರಾಮ ಒಂದೊಮ್ಮೆ ನೇಕಾರಿಕೆಗೆ ಹೆಸರಾಗಿತ್ತು. ಈಗ ಅದು ಸಹ ನಿಂತು ಹೋಗಿದೆ.

ತಾಲ್ಲೂಕಿನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಆಧರಿಸಿ ನಡೆಸಬಹುದಾದ ಹಲವು ಸಣ್ಣ ಕೈಗಾರಿಕೆಗಳನ್ನು ತೆರೆಯಲು ವಿಪುಲವಾದ ಅವಕಾಶಗಳಿದ್ದರೂ ಈ ಕುರಿತು ಗಮನ ಹರಿಸಿಲ್ಲ. ಜಿಲ್ಲೆಯಲ್ಲೆ ಅತ್ಯಂತ ಹೆಚ್ಚಿನ ಅಡಿಕೆಯನ್ನು ತಾಲ್ಲೂಕಿನಲ್ಲಿ ಬೆಳೆಯುತ್ತಿದ್ದು, ಇದಕ್ಕೆ ಸಂಬಂಧಿತ ಸುಗಂಧಿತ ಅಡಿಕೆ ಪುಡಿ ತಯಾರಿಕೆ, ಚಾಕೊಲೇಟ್, ಚಹಾ ಮುಂತಾದ ಉತ್ಪನ್ನಗಳ ತಯಾರಿಕೆ ಉದ್ಯಮಗಳು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನ ಬೆಳೆ ಇರುವ ಕಾರಣ ತೆಂಗಿನ ಉತ್ಪನ್ನ ಆಧರಿಸಿ ಕೊಬ್ಬರಿ ಎಣ್ಣೆ, ವರ್ಜಿನ್ ತೆಂಗಿನೆಣ್ಣೆ, ಕೊಬ್ಬರಿ ಪೌಡರ್ ಉದ್ಯಮ ತೆರೆಯಬಹುದಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಣ್ಣ ಕೈಗಾರಿಕೆಗಳನ್ನು ತೆರೆದು ಉದ್ಯೋಗ ಸೃಷ್ಟಿಸಿಕೊಳ್ಳಲು ಹಲವು ಯೋಜನೆ ರೂಪಿಸಿವೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ಪಡೆಯಲು ಕೈಗಾರಿಕಾ ಇಲಾಖೆಯ ಅಧಿಕಾರಿ ತಾಲ್ಲೂಕಿನಲ್ಲಿ ಇಲ್ಲ ತಾಲ್ಲೂಕು ಪಂಚಾಯತಿ ಅವರಣದಲ್ಲಿ ಇದ್ದ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಚೇರಿಯ ಬಾಗಿಲು ಮುಚ್ಚಿ ಹಲವು ವರ್ಷಗಳಾಗಿವೆ.

ತಾಲ್ಲೂಕಿನಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಾಣಕ್ಕೆ ಹುಲಿಕಲ್ ಕಣಿವೆ ಬಸಪ್ಪ ರಸ್ತೆಯಲ್ಲಿ 25 ಎಕರೆ ಜಮೀನು ನೀಡುವಂತೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಕೈಗಾರಿಕಾ ಪಾರ್ಕ್ ನಿರ್ಮಾಣ ತಮ್ಮ ಕನಸಾಗಿದ್ದು, ಇದರಿಂದ ಹಲವು ಯುವಕರು ಉದ್ಯಮ ಆರಂಭಿಸಿ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತದೆ. ಇದರ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಎ. ಮಂಜು ತಿಳಿಸಿದರು.

ಸಣ್ಣ ಕೈಗಾರಿಕೆಗಳು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ, ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿವೆ. ಸರ್ಕಾರದ ಸೌಲಭ್ಯಗಳು ಕೇವಲ ಘೋಷಣೆಯಾಗಿ ಉಳಿದಿವೆ. ಇದನ್ನು ಉದ್ಯಮಿಗೆ ತಲುಪಿಸಲು ಕ್ರಮ ಅಗತ್ಯ. ಸರ್ಕಾರದ ಯೋಜನೆಗಳ ಮಾಹಿತಿ ಪಡೆಯಲು ತಾಲ್ಲೂಕಿನಲ್ಲಿ ಅಧಿಕಾರಿಗಳು ಇಲ್ಲದಿರುವ ಕಾರಣ ಜಿಲ್ಲಾ ಕೇಂದ್ರಕ್ಕೆ ತೆರಳುವ ಪರಿಸ್ಥಿತಿ ಇದೆ. ಮುಚ್ಚಿರುವ ಕೈಗಾರಿಕಾ
ವಿಸ್ತರಣಾಧಿಕಾರಿ ಕಚೇರಿ ಬಾಗಿಲು ತೆರೆಸಬೇಕು ಎನ್ನುವುದು ಅಡಿಕೆ ಹಾಳೆ ತಟ್ಟೆ ತಯಾರಿಕಾ ಉದ್ಯಮಿ ಎನ್. ರವಿಕುಮಾರ್ ಅವರ ಒತ್ತಾಯ.

ಹಾಸನದ ಕೈಗಾರಿಕಾ ಇಲಾಖೆ ಕಚೇರಿ
ಹಾಸನದಲ್ಲಿ ನಡೆಯುತ್ತಿರುವ ಪೈಪ್‌ ತಯಾರಿಕೆ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.