ADVERTISEMENT

ಅಕಾಲಿಕ ಮಳೆ ತಂದ ಸಂಕಷ್ಟ: ಮುಂಬರುವ ಕಾಫಿ ಫಸಲಿಗೆ ಕಂಟಕ

ಮಲೆನಾಡು ಭಾಗದಲ್ಲಿ ರೈತರು ಕಂಗಾಲು

ಜಾನೆಕೆರೆ ಆರ್‌.ಪರಮೇಶ್‌
Published 9 ಜನವರಿ 2021, 17:10 IST
Last Updated 9 ಜನವರಿ 2021, 17:10 IST
ಸಕಲೇಶಪುರ ತಾಲ್ಲೂಕಿನ ಹಿರಿದನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಗೌಡ ಅವರ ಕಣದಲ್ಲಿ ಹಾಕಿದ್ದ ಕಾಫಿ ಹಣ್ಣು ಮಳೆ ನೀರಿನೊಂದಿಗೆ ಕೊಚ್ಚಿಹೋಗಿದೆ (ಎಡ ಚಿತ್ರ). ಗಿಡದಲ್ಲಿ ಹಣ್ಣು ಇರುವಾಗಲೇ ಹೂವು ಚಿಗುರಿದೆ
ಸಕಲೇಶಪುರ ತಾಲ್ಲೂಕಿನ ಹಿರಿದನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಗೌಡ ಅವರ ಕಣದಲ್ಲಿ ಹಾಕಿದ್ದ ಕಾಫಿ ಹಣ್ಣು ಮಳೆ ನೀರಿನೊಂದಿಗೆ ಕೊಚ್ಚಿಹೋಗಿದೆ (ಎಡ ಚಿತ್ರ). ಗಿಡದಲ್ಲಿ ಹಣ್ಣು ಇರುವಾಗಲೇ ಹೂವು ಚಿಗುರಿದೆ   

ಸಕಲೇಶಪುರ: ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ, ಕಾಳುಮೆಣಸು ಹಾಗೂ ಭತ್ತದ ಫಸಲು ಭಾರಿ ಪ್ರಮಾಣದಲ್ಲಿ ಹಾನಿ ಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ತಾಲ್ಲೂಕಿನ ವಳಲಹಳ್ಳಿ, ಮರ್ಕಳ್ಳಿ, ಹಿರಿದನಹಳ್ಳಿ, ಮರ್ಜನಳ್ಳಿ ಸುತ್ತಮುತ್ತ ಶುಕ್ರವಾರ ರಾತ್ರಿ ಒಂದು ಗಂಟೆ ಅವಧಿಯಲ್ಲಿ ಸುಮಾರು 104 ಮಿ.ಮೀ ಮಳೆಯಾಗಿದೆ. ಕಣದಲ್ಲಿ ಹಾಕಿದ್ದ ಕಾಫಿ ಮಳೆ ನೀರಿನೊಂದಿಗೆ ಚರಂಡಿ, ಹಳ್ಳ, ಕೊಳ್ಳಕ್ಕೆ ಕೊಚ್ಚಿಹೊಗಿದೆ.

‘ಈ ಪ್ರಮಾಣದಲ್ಲಿ ಮಳೆ ಬೀಳುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಜನವರಿ ತಿಂಗಳಲ್ಲಿ ಮಳೆ ಆಗಿರುವುದು ನನ್ನ ಅನುಭವದಲ್ಲಿ ಇದೇ ಮೊದಲು’ ಎಂದು ಹಿರಿದನಹಳ್ಳಿ ಸುಬ್ಬೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಶೇ 50 ಫಸಲು ನಾಶ: ‘ಕಾಫಿ ಹಣ್ಣು ಗಿಡದಲ್ಲಿ ಇರುವಾಗಲೇ ಮಳೆ ಆಗಿರುವುದರಿಂದ ಮುಂದಿನ 8 ದಿನಗಳಲ್ಲಿ ಹೂವು ಅರಳುತ್ತದೆ. ಹೂವು ಒಣಗಿ ಉದುರುವವರೆಗೆ ಅಂದರೆ ಸುಮಾರು 15 ದಿನಗಳ ವರೆಗೆ ಕಾಫಿ ಕೊಯ್ಲು ಮಾಡುವಂತಿಲ್ಲ. ಮಳೆಯಿಂದ ಗಿಡದಲ್ಲಿ ಇರುವ ಹಣ್ಣು ಕಪ್ಪಾಗಿ ತೊಟ್ಟು ಕಳಚಿ ಬೀಳುತ್ತದೆ. ಹಣ್ಣು ಇರುವ ಕೊನೆಯಲ್ಲಿ ಹೂವು ಕಟ್ಟುವುದರಿಂದ ಹಣ್ಣು ಕೊಯ್ಲು ಮಾಡಲು ಹೋದರೆ ಹೂವು ಉದುರಿ ಮುಂದಿನ ಫಸಲು ಹಾಳಾಗುತ್ತದೆ’ ಎಂದು ದಬ್ಬೇಗದ್ದೆ ವೇದಮೂರ್ತಿ ಹೇಳುತ್ತಾರೆ.

‘ಹೂವು ಕಟ್ಟಿರುವ ಗೊಂಚಲಿ ನಲ್ಲಿಯೇ ಹೊಸ ಚಿಗುರು ಸಹ ಹುಟ್ಟುವುದರಿಂದ ಗೊಂಚಲಿನಲ್ಲಿ ಕಾಯಿ ಕಟ್ಟುವ ಪ್ರಮಾಣ ಸಹ ಕಡಿಮೆ ಆಗುತ್ತದೆ. ಇದರಿಂದ ಮುಂದಿನ ಬೆಳೆ ಶೇ 50 ರಷ್ಟು ಕಡಿಮೆ ಆಗುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಅಕಾಲಿಕ ಮಳೆಯಿಂದಾಗಿ ವಾಡಿಕೆಗಿಂತ ಎರಡು ತಿಂಗಳ ಮೊದಲೇ ಕಾಫಿ ಹೂವಾಗುತ್ತದೆ. ಇದನ್ನು ಉಳಿಸಿಕೊಳ್ಳಲು 15 ದಿನಗಳಿಗೊಮ್ಮೆಯಂತೆ ಕನಿಷ್ಠ ನಾಲ್ಕು ಬಾರಿ ನೀರು ಹಾಯಿಸಬೇಕಾಗುತ್ತದೆ. ಹೆಚ್ಚಿರುವ ಡೀಸೆಲ್‌ ಬೆಲೆ, ಕಾರ್ಮಿಕರ ಕೂಲಿ, ಮೋಟರ್‌ ಬಾಡಿಗೆ ವೆಚ್ಚ ಭರಿಸಬೇಕಾಗಿದೆ. ನೀರು ಹಾಯಿಸದೆ ಹೋದರೆ ಫಸಲು ಉಳಿಯುವುದಿಲ್ಲ. ಕಾಫಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ’ ಎಂದು ತೋಟದಗದ್ದೆ ವಿನಯ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.