ADVERTISEMENT

ಅಮೆರಿಕ ದಂಪತಿ ಮಡಿಲು ಸೇರಿದ ಮತ್ತೊಂದು ಮಗು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 2:24 IST
Last Updated 13 ನವೆಂಬರ್ 2025, 2:24 IST
ಹಾಸನದ ತವರು ಚಾರಿಟಬಲ್‌ ಟ್ರಸ್ಟ್‌ನಲ್ಲಿದ್ದ ಮಗುವನ್ನು ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಕೆನೆತ್ ಡೇವಿಡ್ ಕಿರ್ಬಿ ಮತ್ತು ಬೆಥನಿ ರಚೆಲ್ಲಿ ಕಿರ್ಬೆ ದಂಪತಿ ದತ್ತು ಪಡೆದರು 
ಹಾಸನದ ತವರು ಚಾರಿಟಬಲ್‌ ಟ್ರಸ್ಟ್‌ನಲ್ಲಿದ್ದ ಮಗುವನ್ನು ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಕೆನೆತ್ ಡೇವಿಡ್ ಕಿರ್ಬಿ ಮತ್ತು ಬೆಥನಿ ರಚೆಲ್ಲಿ ಕಿರ್ಬೆ ದಂಪತಿ ದತ್ತು ಪಡೆದರು    

ಹಾಸನ: ನಗರದ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ ಆಶ್ರಯದಲ್ಲಿದ್ದ ವಿಶೇಷ ಅಗತ್ಯತೆಯ ಗಂಡು ಮಗುವನ್ನು ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಕೆನೆತ್ ಡೇವಿಡ್ ಕಿರ್ಬಿ ಮತ್ತು ಬೆಥನಿ ರಚೆಲ್ಲಿ ಕಿರ್ಬೆ ದಂಪತಿ ಕಾನೂನಿನ ಪ್ರಕಾರ ದತ್ತು ಪಡೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೆಣ್ಣು ಮಗುವೊಂದನ್ನು ಅಮೆರಿಕದ ದಂಪತಿ ದತ್ತು ಪಡೆದಿದ್ದರು. ಇದರೊಂದಿಗೆ ತವರು ಸಂಸ್ಥೆಯಿಂದ ಇದುವರೆಗೆ 214 ಮಕ್ಕಳನ್ನು ದತ್ತು ನೀಡಿದಂತಾಗಿದೆ.

ಈ ವೇಳೆ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಡಾ. ಪಾಲಾಕ್ಷ, ‘ಈ ಮಗು ಅಪರೂಪದ ದೈಹಿಕ ಸಮಸ್ಯೆಯಿಂದ ಬಳಲುತ್ತಿತ್ತು. ಅಗತ್ಯ ಚಿಕಿತ್ಸೆ ನೀಡಿ ಮಗು ಚೇತರಿಸಿಕೊಂಡ ನಂತರ ಮಕ್ಕಳ ಕಲ್ಯಾಣ ಸಮಿತಿ ಸಲಹೆಯಂತೆ ಕಾನೂನುಬದ್ಧದ ಪ್ರಕ್ರಿಯೆ ಮೂಲಕ ದತ್ತು ನೀಡಲಾಗಿದೆ ಎಂದರು.

ಮಗು ಸಂಸ್ಥೆಗೆ ಬಂದ ನಂತರ 2 ತಿಂಗಳು ಕಾಲ ಪೋಷಕರ ಹುಡುಕಾಟ ನಡೆಯುತ್ತದೆ. ಪೋಷಕರು ಸಿಗದಿದ್ದರೆ, ಮಕ್ಕಳ ಕಲ್ಯಾಣ ಸಮಿತಿ ದತ್ತು ಪ್ರಕ್ರಿಯೆಗೆ ಅನುಮತಿ ನೀಡುತ್ತದೆ. ನಂತರ ಕೋರ್ಟ್ ಆದೇಶ, ಕೇಂದ್ರ ಸರ್ಕಾರದ ಅನುಮತಿ ಮತ್ತು ಪಾಸ್‌ಪೋರ್ಟ್ ಸಿದ್ಧತೆಗಳ ನಂತರ ಮಗು ಹೊಸ ದೇಶಕ್ಕೆ ಪ್ರಯಾಣಿಸುತ್ತದೆ ಎಂದು ವಿವರಿಸಿದರು.

ADVERTISEMENT

ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಹಲವು ವರ್ಷಗಳಿಂದ ಅನಾಥ ಮತ್ತು ನಿರಾಶ್ರಿತ ಮಕ್ಕಳಿಗೆ ಆರೈಕೆ, ಶಿಕ್ಷಣ ಮತ್ತು ಹೊಸ ಜೀವನದ ಅವಕಾಶ ಒದಗಿಸುತ್ತಿದ್ದು, ಈ ಘಟನೆಯು ಸಂಸ್ಥೆಯ ಮಾನವೀಯ ನಡೆಗೆ ಮತ್ತೊಂದು ಅಧ್ಯಾಯವಾಗಿದೆ ಎಂದರು.

ಟ್ರಸ್ಟಿಗಳಾದ ಮಧುಪ್ರಿಯ ಹಾಗೂ ಇತರರು ಉಪಸ್ಥಿತರಿದ್ದು, ಮಗುವಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.