ADVERTISEMENT

ಜನತೆ ತೀರ್ಪು ಎಲ್ಲರೂ ಒಪ್ಪಿಕೊಳ್ಳಬೇಕು: ಸಚಿವ ಕೆ.ಎಸ್.ಈಶ್ವರಪ್ಪ

ಹಾಸನಾಂಬೆ ದರ್ಶನ ಪಡೆದ ಸಚಿವ ಈಶ್ವರಪ್ಪ ಕುಟುಂಬ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 17:06 IST
Last Updated 13 ನವೆಂಬರ್ 2020, 17:06 IST
‌ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಕುಟುಂಬದವರು ಹಾಸನಾಂಬೆ ದರ್ಶನ ಪಡೆದರು.
‌ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಕುಟುಂಬದವರು ಹಾಸನಾಂಬೆ ದರ್ಶನ ಪಡೆದರು.   

ಹಾಸನ: ಚುನಾವಣೆಯಲ್ಲಿ ಸೋಲು–ಗೆಲುವು ಸಾಮಾನ್ಯ. ಹಾಗಾಗಿ ಜನತೆ ತೀರ್ಪನ್ನು ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಕುಟುಂಬ ಸಮೇತರಾಗಿ ಶುಕ್ರವಾರ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿ ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಮುಖ್ಯಮಂತ್ರಿ ಮತ್ತು ಕೇಂದ್ರ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲ ಶಾಸಕರು ಬದ್ಧರಾಗಿರುತ್ತಾರೆ. ಎರಡೂ ವಿಧಾನಸಭೆ ಉಪ ಚುನಾವಣೆ, ನಾಲ್ಕು ವಿಧಾನ ಪರಿಷತ್‌ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಚುನಾವಣೆ ಎಂದರೆ ವಿರೋಧ ಪಕ್ಷಗಳಿಗೆ ಚಳಿ, ಜ್ವರ ಬಂದಂತಾಗಿದೆ. ಚುನಾವಣಾ ಪೂರ್ವವದಲ್ಲಿ ಕಾಂಗ್ರೆಸ್ ನಾಯಕರು ಈ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದ್ದರು. ಮೋದಿ ಮತ್ತು ಯಡಿಯೂರಪ್ಪ ಅವರ ಆಡಳಿತ ಮೆಚ್ಚಿ ಜನತೆ ಬೆಂಬಲಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರ ಹೇಳಿಕೆಯಲ್ಲಿಯೇ ಗೊಂದಲ ಇದೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಇಲ್ಲ. ಕೊನೆ ಪಕ್ಷ ಹೇಳಿಕೆ ನೀಡುವಾಗಲಾದರೂ ಒಟ್ಟಿಗೆ ಇರಲಿ. ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತಾಗಿದೆ ಕಾಂಗ್ರೆಸ್‌ ಪರಿಸ್ಥಿತಿ. ಅಧಿಕಾರ ಕೊಟ್ಟಾಗ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಲಿಲ್ಲ ಎಂಬ ಕಾರಣಕ್ಕೆ ಜನತೆ ತಿರಸ್ಕರಿಸಿದರು ಎಂದರು.

ADVERTISEMENT

ಎಲ್ಲ ಭಕ್ತರಿಗೂ ದರ್ಶನ ಸಿಗಲಿಲ್ಲ ಎಂಬುದೇ ನೋವಿನ ಸಂಗತಿ. ಕೊರೊನಾದಿಂದ ದೇಶ ಮುಕ್ತವಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಬಿ.ಎ.ಪರಮೇಶ್, ಮುಖಂಡ ನವಿಲೆ ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.