ADVERTISEMENT

ವಿಡಿಯೋ ವೈರಲ್: ನೊಂದ ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:19 IST
Last Updated 20 ಸೆಪ್ಟೆಂಬರ್ 2025, 4:19 IST

ಹಾಸನ: ನಗರದ ಮಹಾರಾಜ ಪಾರ್ಕ್‌ನಲ್ಲಿ ಕಾಲೇಜು ಸ್ನೇಹಿತೆಯರೊಂದಿಗೆ ಕುಳಿತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲ್ಲೂಕಿನ ಮೊಸಳೆಹೊಸಳ್ಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದ ಕಲ್ಲೇನಹಳ್ಳಿ ಗ್ರಾಮದ ಕೆ. ಪವನ್‌ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬುಧವಾರ ಹಾಸನಕ್ಕೆ ಬಂದಿದ್ದ ಪವನ್‌, ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಪಾರ್ಕ್‌ನ ಆಸನದ ಮೇಲೆ ಕುಳಿತಿದ್ದ. ಮೂವರು ಹುಡುಗಾಟ ಮಾಡುತ್ತ ಕುಳಿತಿದ್ದ ದೃಶ್ಯವನ್ನು ದೂರದಿಂದ ಮಹಿಳೆಯೊಬ್ಬರು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು.

‘ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಕರ್ಮಕಾಂಡ ಮಾಡಿಕೊಂಡು ಕುಳಿತಿದ್ದಾರೆ. ಸಣ್ಣ ಮಕ್ಕಳು ಓಡಾಡುವ ಜಾಗದಲ್ಲಿ ಹೇಗಿರಬೇಕೆಂಬ ಪರಿಜ್ಞಾನ ಇಲ್ಲವೇ? ಇಂತವರಿಗೆ ಏನು ಮಾಡಬೇಕು? ನಮ್ಮ ಸಮಾಜ ಯಾವ ಸ್ಥಿತಿ ತಲುಪಿದೆ ನೋಡಿ. ಇಂಥವರಿಗೆ ಏನು ಮಾಡಬೇಕು’ ಎಂದು ಆ ವಿಡಿಯೋ ಅನ್ನು ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ADVERTISEMENT

ಈ ವಿಡಿಯೋ ಪವನ್‌ನ ಸ್ನೇಹಿತರಿಗೂ ಸಿಕ್ಕಿತ್ತು. ಇದರಿಂದ ಮನನೊಂದ ಆತ, ಎಲ್ಲರಿಗೂ ಕರೆ ಮಾಡಿ ಡಿಲೀಟ್‌ ಮಾಡುವಂತೆ ಗೋಗರೆದಿದ್ದ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಮನನೊಂದು ತಮ್ಮ ಮನೆಯ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡಿದ್ದಾನೆ.

ಬಡ ಕುಟುಂಬದ ಪವನ್‌ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಮನೆಗೆಲಸ ಮಾಡಿಕೊಂಡು ಆತನನ್ನು ಬೆಳೆಸಿದ್ದರು. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸ್ಟೆಲ್‌ನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಹಾಸನ: ನಗರದ ಸಾಲಗಾಮೆ ರಸ್ತೆಯಲ್ಲಿರುವ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ದರ್ಶನ್ (24) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತುರುವೇಕೆರೆ ನಗರದ ನಂಜುಂಡೇಗೌಡ-ಮಮತಾ ದಂಪತಿ ಪುತ್ರ ದರ್ಶನ್, ಅಂತಿಮ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಕಾಲೇಜಿನ ಹಾಸನಾಂಬ ಬ್ಲಾಕ್‌ನ ಹಾಸ್ಟೆಲ್ ಕೋಣೆಯಲ್ಲಿ ಪ್ಲಾಸ್ಟಿಕ್ ವಯರ್‌ ಬಳಸಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಹಾಸ್ಟೆಲ್ ಆವರಣದಲ್ಲಿದ್ದ ವಿದ್ಯಾರ್ಥಿಗಳು ಭಯಭೀತರಾಗಿ ಹೊರಗೆ ಜಮಾಯಿಸಿದ್ದು, ಕಾಲೇಜಿನ ಮುಂಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ಸೇರಿದ್ದರು.

ಸ್ಥಳಕ್ಕೆ ಎಎಸ್ಪಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲಿಸಿದರು. ಪೆನ್ಷನ್‌ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಲೇಜು ಆವರಣ ಮತ್ತು ಹಾಸ್ಟೆಲ್‌ನಲ್ಲಿ ಎಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗಾಂಜಾ ಬೆಳೆದ ಆರೋಪಿ ಬಂಧನ

ಹಾಸನ: ಬೇಲೂರು ತಾಲ್ಲೂಕಿನ ಹೊನ್ನೇನಹಳ್ಳಿ ಕಾವಲಿನ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬೇಲೂರಿನ ಪೊಲೀಸರು ಬಂಧಿಸಿದ್ದಾರೆ.

ಬೇಲೂರು ಠಾಣೆ ಇನ್‌ಸ್ಪೆಕ್ಟರ್‌ ರೇವಣ್ಣ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದು, ಕಲ್ಲುಶೆಟ್ಟಿಹಳ್ಳಿ ಗ್ರಾಮದ ವೆಂಕಟೇಶ ಎಂಬಾತನನ್ನು ಬಂಧಿಸಲಾಗಿದೆ. ಹೊನ್ನೇನಹಳ್ಳಿಯ ದೊಡ್ಡ ಬ್ಯಾಡಿಗೆರೆಯ ಮಲ್ಲಿಕಾರ್ಜುನ ಅವರಿಗೆ ಸೇರಿದ ಜಮೀನಿನಲ್ಲಿ ಶುಂಠಿಯ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆದಿರುವುದು ಪತ್ತೆಯಾಗಿದೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.