ADVERTISEMENT

ಆಲೂರು: ‘ಸದ್ಗತಿ ಬಾಕಣ್ಣಯ್ಯ’ಗೆ ಗ್ರಾಮಸ್ಥರ ನಮನ

ಅಳುಕಿಲ್ಲದೇ ಅಂತ್ಯಕ್ರಿಯೆ ಮಾಡುತ್ತಿದ್ದ ಚಂದ್ರೇಗೌಡ ನಿಧನ

ಎಂ.ಪಿ.ಹರೀಶ್
Published 30 ಆಗಸ್ಟ್ 2024, 5:09 IST
Last Updated 30 ಆಗಸ್ಟ್ 2024, 5:09 IST
ಚಂದ್ರೇಗೌಡ
ಚಂದ್ರೇಗೌಡ   

ಆಲೂರು: ಐದು ದಶಕಗಳಿಂದ ಮರಸು ಹೊಸಳ್ಳಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಮರಣ ಹೊಂದಿದವವರಿಗೆ ಯಾವುದೇ ಅಳುಕಿಲ್ಲದೇ ಮುಂದೆ ನಿಂತು ಸದ್ಗತಿ ಮಾಡುತ್ತಿದ್ದ ಅದೇ ಗ್ರಾಮದ ಚಂದ್ರೇಗೌಡ (ಬಾಕಣ್ಣಯ್ಯ 79) ಗುರುವಾರ ನಿಧನರಾದರು. ಸ್ವಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸಿದ್ದರು.

ಇವರ ಮೂಲ ಹೆಸರು ಚಂದ್ರೇಗೌಡ. ಮರಣ ಹೊಂದಿದವರಿಗೆ ಸದ್ಗತಿ ಮಾಡುತ್ತಿದ್ದರಿಂದ ‘ಸದ್ಗತಿ ಬಾಕಣ್ಣಯ್ಯ’ ಎಂಬ ಹೆಸರು ಪ್ರಖ್ಯಾತಿ ಪಡೆದಿತ್ತು. ತಮ್ಮ 25ನೇ ವಯಸ್ಸಿನಿಂದಲೇ ಮರಸು ಹೊಸಳ್ಳಿ ಸುತ್ತಲಿನ ಯಾವುದೇ ಗ್ರಾಮಗಳಲ್ಲಿ ವಯೋಸಹಜ, ಆಕಸ್ಮಿಕ, ಅಪಘಾತ ಇನ್ನಿತರೆ ಕಾರಣಗಳಿಂದ ಯಾರೇ ಮೃತಪಟ್ಟರೂ, ಇವರು ಮುಂದೆ ನಿಂತು ಮೃತ ಶರೀರ ಶುಚಿಗೊಳಿಸಿ ಅಂತ್ರಕ್ರಿಯೆವರೆಗೂ ಕೆಲಸ ಮಾಡುತ್ತಿದ್ದರು.

ಯಾವುದೇ ಸಾವು ಸಂಭವಿಸಿದ ಸಂದರ್ಭದಲ್ಲಿ ಮೊದಲು ಬಾಕಣ್ಣಯ್ಯ ಅವರಿಗೆ ಸುದ್ದಿ ಮುಟ್ಟಿಸಿ, ನಂತರ ಇತರರಿಗೆ ವಿಷಯ ತಿಳಿಸುವ ವಾಡಿಕೆ ಐದು ದಶಕಗಳಿಂದ ನಡೆದುಕೊಂಡು ಬಂದಿತ್ತು.

ADVERTISEMENT

ಇಂದು ಇವರು ಮೃತಪಟ್ಟ ಸುದ್ದಿ ತಿಳಿದ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಇನ್ನು ಮುಂದೆ ಇಂತಹ ಕೆಲಸ ಮಾಡುವ ವ್ಯಕ್ತಿ ಯಾರು ಎಂದು ಪ್ರಶ್ನೆ ಮಾಡಿಕೊಂಡು ಮರುಗುತ್ತಿದ್ದರು.

‘ಮೃತಪಟ್ಟವರನ್ನು ಮುಟ್ಟಲೂ ಹಿಂಜರಿಯುವ ಕೆಲ ಸಂದರ್ಭಗಳಲ್ಲಿ ಸದ್ಗತಿ ಬಾಕಣ್ಣಯ್ಯ ಅವರು ಮಾನವೀಯತೆ ಮೆರೆದು ಅಂತ್ಯಸಂಸ್ಕಾರದವರೆಗೂ ಯಾವುದೇ ಅಳುಕಿಲ್ಲದೆ ಕೆಲಸ ಮಾಡುತ್ತಿದ್ದರು’ ಎಂದು ಗ್ರಾಮಸ್ಥರು ಹೇಳಿದರು.

ಸಾವಿನ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದು ಎಲ್ಲ ಕ್ರಿಯೆ ನಡೆಸುತ್ತಿದ್ದರು. ಇವರೊಬ್ಬ ಮಾನವೀಯತೆಯುಳ್ಳ ಧೈರ್ಯಗಾರ.

-ಎಚ್.ಜೆ. ಪೃಥ್ವಿರಾಜ ಕಣತೂರು ಗ್ರಾ.ಪಂ. ಅಧ್ಯಕ್ಷ

ಅಂತ್ಯಕ್ರಿಯೆ ಮಾಡುವುದರಲ್ಲಿಯೇ ಬಾಕಣ್ಣಯ್ಯ ತೃಪ್ತಿ ಪಡುತ್ತಿದ್ದರು. ಫಲಾಪೇಕ್ಷೆ ಇಲ್ಲದೇ ಒಂದು ಸೇವೆ ಎಂದು ಮಾಡುತ್ತಿದ್ದೇನೆ ಎನ್ನುತ್ತಿದ್ದರು.

-ನಟರಾಜ್ ತಾ.ಪಂ. ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.