ADVERTISEMENT

ಪಕ್ಷದ ವಿಪ್‌ ಉಲ್ಲಂಘನೆ: ಹಾಸನ ಮೇಯರ್‌ ಚಂದ್ರೇಗೌಡ ಸದಸ್ಯತ್ವ ಅನರ್ಹ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 23:21 IST
Last Updated 16 ಆಗಸ್ಟ್ 2025, 23:21 IST
ಎಂ.ಚಂದ್ರೇಗೌಡ
ಎಂ.ಚಂದ್ರೇಗೌಡ   

ಹಾಸನ: ಪಕ್ಷದ ವಿಪ್‌ ಉಲ್ಲಂಘಿಸಿದ ಮೇಯರ್ ಎಂ.ಚಂದ್ರೇಗೌಡ ಅವರನ್ನು ಪಾಲಿಕೆ ಸದಸ್ಯತ್ವದಿಂದ ಅನರ್ಹಗೊಳಿಸಿ ಮೈಸೂರಿನ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. 

ನಗರಸಭೆ ಅಧ್ಯಕ್ಷರಾಗಿದ್ದ ಎಂ.ಚಂದ್ರೇಗೌಡರ ವಿರುದ್ಧ ಜೆಡಿಎಸ್‌ನಿಂದ ಏ. 28 ರಂದು ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಚಂದ್ರೇಗೌಡ ಸೇರಿ ಜೆಡಿಎಸ್‌ನ 17 ಸದಸ್ಯರಿಗೆ ವಿಪ್‌ ಹೊರಡಿಸಲಾಗಿತ್ತು. ಆಗ ಚಂದ್ರೇಗೌಡ ತಟಸ್ಥವಾಗಿ ಉಳಿದಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಚಂದ್ರೇಗೌಡರನ್ನು ಬೆಂಬಲಿಸಿದ್ದರಿಂದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿತ್ತು.

ಚಂದ್ರೇಗೌಡರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಜೆಡಿಎಸ್‌ ಸದಸ್ಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ನಂತರ ಹಾಸನ ನಗರಸಭೆಯು ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ್ದು, ದೂರನ್ನು ಪ್ರಾದೇಶಿಕ ಆಯುಕ್ತರಿಗೆ ವರ್ಗಾಯಿಸಲಾಗಿತ್ತು.

ADVERTISEMENT

ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತ ರಮೇಶ್‌ ಡಿ.ಎಸ್. ಸದಸ್ಯತ್ವ ಅನರ್ಹಗೊಳಿಸಿ ಆದೇಶಿಸಿದರು. ಹಂಗಾಮಿ ಮೇಯರ್‌ ಆಗಿ ಉಪ ಮೇಯರ್‌ ಹೇಮಲತಾ ಅಧಿಕಾರ ವಹಿಸಿಕೊಂಡರು. ಈ ಕುರಿತು ಪ್ರತಿಕ್ರಿಯೆಗೆ ಚಂದ್ರೇಗೌಡರು ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.