ADVERTISEMENT

ಸಂಜೀವಿನಿ ಸೌಹಾರ್ದ ಸಂಘದಿಂದ ನಿಯಮ ಉಲ್ಲಂಘನೆ

ಮಾಜಿ ಶಾಸಕರ ಪತ್ನಿ ಸೇರಿ ಸಂಘದ 11 ನಿರ್ದೇಶಕರು ಅನರ್ಹ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:31 IST
Last Updated 28 ಜೂನ್ 2025, 16:31 IST

ಪ್ರಜಾವಾಣಿ ವಾರ್ತೆ

ಹಾಸನ: ಮಾಜಿ ಶಾಸಕ ಎಚ್‌.ಎಸ್. ಪ್ರಕಾಶ್‌ ಅವರ ಪತ್ನಿ ಹಾಗೂ ಹಾಲಿ ಶಾಸಕ ಸ್ವರೂಪ್‌ ಪ್ರಕಾಶ್‌ ಅವರ ತಾಯಿ ಲಲಿತಾಮಣಿ ಸೇರಿದಂತೆ ನಗರದ ಸಂಜೀವಿನಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 11 ನಿರ್ದೇಶಕರನ್ನು ನಾಲ್ಕು ವರ್ಷಗಳ ಅವಧಿಗೆ ಅನರ್ಹಗೊಳಿಸಿ, ಜೂನ್‌ 24 ರಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ ಆದೇಶ ಹೊರಡಿಸಿದ್ದಾರೆ.

ಸಂಜೀವಿನಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ವೆಂಕಟರಾಮು, ಎಚ್‌.ಜಿ. ಗಣೇಶ್‌, ಕೆ.ಆರ್. ಚನ್ನಕೇಶವ, ಗಿರಿಗೌಡ, ಶಂಕರ್ ಜಿ.ಕೆ., ಅರುಣ್‌ಕುಮಾರ್ ಡಿ., ಜಯಲಕ್ಷ್ಮಿ, ಲಲಿತಾಮಣಿ ಪ್ರಕಾಶ್‌, ಪಿ.ಎಂ.ಪುಟ್ಟರಾಜು, ಧರಣಿಜೈನ್‌, ಎಚ್‌. ಸುರೇಶ್‌ ಅವರನ್ನು ಅನರ್ಹಗೊಳಿಸಲಾಗಿದ್ದು, ಇವರು ಇತರೆ ಯಾವುದೇ ಸಹಕಾರ ಸಂಘದ ನಿರ್ದೇಶಕರಾಗಿ ಮುಂದುವರಿಯಲು ಅನರ್ಹರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

2019–20 ರಿಂದ 2023–24 ರವರೆಗೆ ಆಡಳಿತ ಮಂಡಳಿ ಸದಸ್ಯರ ಮಾಸಿಕ ಸಭೆ ಹಾಗೂ ಸಾಮಾನ್ಯ ಸಭೆ ನಡೆಸಿಲ್ಲ. ಸಂಘದ ಲೆಕ್ಕ ಪರಿಶೋಧನೆ ಸಹ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಸಂಘದ ನಿರ್ದೇಶಕರನ್ನು ಅಮಾನತು ಮಾಡುವಂತೆ ಸಂಜೀವಿನಿ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯ ಜಿ.ಕೆ. ಕುಮಾರಸ್ವಾಮಿ ಅವರು, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘಕ್ಕೆ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಸಂಘದ ಆಡಳಿತ ಮಂಡಳಿ ಮತ್ತು ಪ್ರಾಧಿಕಾರ, ಕೋವಿಡ್–19 ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಅವಕಾಶ ನೀಡಿದ್ದರೂ, ಅದನ್ನು ಬಳಸಿಕೊಂಡಿಲ್ಲ. 2019–20 ರಿಂದ 2022–23 ರವರೆಗಿನ ವಾರ್ಷಿಕ ಸಾಮಾನ್ಯ ಸಭೆ ನಡೆಸದೇ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ ಉಲ್ಲಂಘಿಸಲಾಗಿದೆ. ಲೆಕ್ಕ ಪರಿಶೋಧನಾ ವರದಿ ಸಲ್ಲಿಸದೆ ಇರುವುದೂ ನಿಯಮದ ಉಲ್ಲಂಘನೆಯಾಗಿದೆ. ಎರಡೂ ನಿಯಮ ಉಲ್ಲಂಘನೆ ಆಗಿರುವುದನ್ನು ಸಹಕಾರಿಯ ನಿರ್ದೇಶಕರು ಅಫಿದಾವಿತ್‌ ಮೂಲಕ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆಡಳಿತ ಮಂಡಳಿ ನಿರ್ದೇಶಕರನ್ನು ನಾಲ್ಕು ವರ್ಷಗಳ ಅವಧಿಗೆ ಅನರ್ಹಗೊಳಿಸುವಂತೆ ತೀರ್ಮಾನಿಸಿತ್ತು. ಅದರ ಅನುಸಾರ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.