ADVERTISEMENT

ವಿಶ್ವಕರ್ಮರ ದಾರಿಯಲ್ಲಿ ನಡೆಯೋಣ

ವಿಶ್ವಕರ್ಮ ಜಯಂತಿ ಉದ್ಘಾಟಿಸಿದ ಸಂಸದ ಶ್ರೇಯಸ್ ಪಟೇಲ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 2:59 IST
Last Updated 18 ಸೆಪ್ಟೆಂಬರ್ 2025, 2:59 IST
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಶಿವಚಂದ್ರಶೇಖರ ಸ್ವಾಮೀಜಿ ಜ್ಯೋತಿ ಬೆಳಗಿದರು
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಶಿವಚಂದ್ರಶೇಖರ ಸ್ವಾಮೀಜಿ ಜ್ಯೋತಿ ಬೆಳಗಿದರು   

ಹಾಸನ: ದೇವಾನುದೇವತೆಗಳಿಗೆ ಆಯುಧ, ರಥಗಳನ್ನು ಮಾಡಿಕೊಟ್ಟವರು ವಿಶ್ವಕರ್ಮರು. ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುಧವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕರ್ಮರನ್ನು ಪ್ರಪಂಚದ ಶ್ರೇಷ್ಠ ದೇವರಿಗೆ ಹೋಲಿಸುವ ಕೆಲಸ ಮಾಡಬೇಕು. ಕೇವಲ ಒಂದು ಸಮಾಜಕ್ಕೆ ಅಲ್ಲ. ಇಡೀ ಪ್ರಪಂಚಕ್ಕೆ ತಿಳಿಹೇಳುವ, ಸಮಾಜದ ಏಳ್ಗೆಗೆ ಶ್ರಮಿಸುವ ಕೆಲಸ ಮಾಡಬೇಕು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಸರ್ಕಾರ ಶಾಸಕರ ನಿಧಿಯಾಗಿ ₹ 25 ಕೋಟಿ ನೀಡಲಾಗಿದೆ. ಅದರಲ್ಲಿ ಮೊದಲಿಗೆ ನಿಮ್ಮ ಸಮುದಾಯದ ಮಕ್ಕಳಿಗೆ ಅನುಕೂಲವಾಗಲು ವಸತಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ₹ 25 ಲಕ್ಷ ನೀಡುತ್ತೇನೆ. ಈಗಾಗಲೇ ಜಕಣಾಚಾರಿ ವೃತ್ತ ಎಂದು ಸರ್ಕಲ್‍ಗೆ ಹೆಸರನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಪ್ರತಿಮೆ ಮಾಡಿಸುತ್ತೇನೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಮಾತನಾಡಿ, ನಮ್ಮ ನೆಲದ ಸಂಸ್ಕೃತಿ, ಪ್ರಪಂಚ ಸುಂದರವಾಗಿರಲು ವಿಶ್ವಕರ್ಮ ಸಮಾಜದವರು ಕಾರಣರಾಗಿದ್ದಾರೆ. ಈ ಸಮುದಾಯದವರ ಕೊಡುಗೆ ನಮ್ಮ ದೇಶಕ್ಕೆ ಅಪಾರವಾಗಿದೆ. ವಿಶ್ವಕರ್ಮ ಜಯಂತಿ ಒಂದು ಸಮುದಾಯಕ್ಕೆ ಮಾತ್ರ ಮೀಸಲಾಗಿಲ್ಲ. ಬದಲಿಗೆ ಇಡೀ ಪ್ರಪಂಚಕ್ಕೆ ಮೀಸಲಾಗಿದೆ ಎಂದರು.

ಶಿವಚಂದ್ರಶೇಖರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮದವರು ಮಾಡುವ ಕೆಲಸ ಬಹಳ ಶ್ರೇಷ್ಠ ಹಾಗೂ ವಿಶೇಷವಾದದ್ದು. ಜೊತೆಗೆ ಶ್ರೇಷ್ಠ ಮನುಷ್ಯ ಜನ್ಮವನ್ನು ಭಗವಂತ ನಮಗೆ ನೀಡಿದ್ದಾನೆ. ಹಾಗಾಗಿ ನಾವೆಲ್ಲರೂ ಅತಃಕರಣ ಶುದ್ಧಿ ಮಾಡಿಕೊಂಡು ಮಹನೀಯರ ದಾರಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಉಡುಪಿ ಜಿಲ್ಲೆಯ ಬಾರ್ಕೂರಿನ ಎನ್.ಆರ್. ದಾಮೋದರ ಶರ್ಮ ಮಾತನಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ. ತಾರಾನಾಥ್, ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌, ಸಮುದಾಯದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.