ADVERTISEMENT

ವಾಲಿಬಾಲ್‌: ಗ್ರಾಮೀಣ ಪ್ರತಿಭೆ ಮಿಂಚು

ಹನ್ಯಾಳು ಗ್ರಾಮದ ಪ್ರೀತಿಗೆ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಮಹದಾಸೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:04 IST
Last Updated 11 ಅಕ್ಟೋಬರ್ 2021, 2:04 IST
ಖೇಲೋ ಇಂಡಿಯಾ ಯೂತ್ ಗೇಮ್ಸ್‌ದಲ್ಲಿ ರಾಜ್ಯ ವಾಲಿಬಾಲ್‌ ತಂಡದ ನಾಯಕಿಯಾಗಿದ್ದ ಪ್ರೀತಿ ತಂಡದೊಂದಿಗೆ (ಮಂಡಿಯೂರಿ ಕುಳಿತವರಲ್ಲಿ ಎಡದಿಂದ ಎರಡನೇಯವರು)
ಖೇಲೋ ಇಂಡಿಯಾ ಯೂತ್ ಗೇಮ್ಸ್‌ದಲ್ಲಿ ರಾಜ್ಯ ವಾಲಿಬಾಲ್‌ ತಂಡದ ನಾಯಕಿಯಾಗಿದ್ದ ಪ್ರೀತಿ ತಂಡದೊಂದಿಗೆ (ಮಂಡಿಯೂರಿ ಕುಳಿತವರಲ್ಲಿ ಎಡದಿಂದ ಎರಡನೇಯವರು)   

ಹಾಸನ: ಬಡತನ ಮೆಟ್ಟಿನಿಂತು ರಾಷ್ಟ್ರ ಮಟ್ಟದ ವಾಲಿಬಾಲ್‌ನಲ್ಲಿ ಪದಕಗಳನ್ನು ಪಡೆದಿರುವ ಅರಕಲಗೂಡು ತಾಲ್ಲೂಕು ಹನ್ಯಾಳು ಗ್ರಾಮದ ಪ್ರೀತಿ ಸಾಧನೆ ಇತರರಿಗೆ ಸ್ಫೂರ್ತಿಯಾಗಿದೆ.

‌ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಅನೇಕ ಕ್ರೀಡಾಕೂಟದಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, ರಾಷ್ಟ್ರಮಟ್ಟದ ತಂಡವನ್ನು ಪ್ರತಿನಿಧಿಸುವ ಮಹಾದಾಸೆ ಹೊಂದಿದ್ದಾರೆ.

‌ಪ್ರೀತಿ ಅವರ ತಂದೆ ಮಂಜು ಹಾಗೂ ತಾಯಿ ಅನುಸೂಯಾ ಕೃಷಿಕರು. ಕಷ್ಟದಿಂದಲೇ ಬೆಳೆದು ಬಂದಿರುವ ಅವರು ಮನೆಯಲ್ಲಿ ಬಡತನವಿದ್ದರೂ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆದಮ್ಯ ಉತ್ಸಾಹ ಅವರನ್ನು ಈ ಮಟ್ಟಕ್ಕೆ ಕರೆತಂದಿದೆ.

ADVERTISEMENT

ಗುವಾಹಟಿಯಲ್ಲಿ 2016ರಲ್ಲಿ ನಡೆದ ಖೇಲೋ ಇಂಡಿಯಾ 3ನೇ ಆವೃತ್ತಿಯ ಯೂತ್‌ ಗೇಮ್‌ನ 17 ವರ್ಷ ಒಳಗಿನ ಬಾಲಕಿಯರ ವಾಲಿಬಾಲ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಪ್ರೀತಿ ಕಂಚಿನ ಪದಕ ಪಡೆದಿದ್ದಾರೆ.

ಅಷ್ಟೇ ಅಲ್ಲದೆ ರಾಜ್ಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಈವರೆಗೆ 6 ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ 3 ಬಾರಿ ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಮೊದಲ ರಾಷ್ಟ್ರೀಯ ಪಂದ್ಯದಲ್ಲಿ ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ಕಳೆದ ಎರಡು ವರ್ಷಗಳಿಂದ ಪ್ರೀತಿ ತಂಡದ ನಾಯಕಿಯಾಗಿದ್ದಾರೆ.

ನಗರದ ಆದಿ ಚುಂಚನಗಿರಿ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. ಪ್ರಥಮ ಪಿಯುಸಿ ಓದುತ್ತಿದ್ದು,ಹಾಸನದ ಡಿ.ಒ.ಎಸ್‌ ರಮೇಶ್‌ ಅವರಲ್ಲಿ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ.

‌‘ವಾಲಿಬಾಲ್‌ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕು. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಬೇಕೆಂಬ ಆಸೆ ಇದೆ. ನಾನು ಆಲ್‌ ರೌಂಡರ್‌ ಆಗಿದ್ದು, ಕ್ರೀಡಾ ತರಬೇತುದಾರ ರಮೇಶ್‌ ಅವರು ಚೆನ್ನಾಗಿ ಹೇಳಿ ಕೊಡುತ್ತಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಿತ್ಯ ತರಬೇತಿ ಪಡೆಯುತ್ತಿದ್ದೇನೆ. ಬಡತನವಿದ್ದರೂ ಕಷ್ಟಪಟ್ಟು ತಂದೆ, ತಾಯಿ ನನಗೆ ಪ್ರೋತ್ಸಾಹಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕೆಂದಬ ಆಸೆ ಇದೆ’ ಎಂದು ಪ್ರೀತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.