ADVERTISEMENT

ಹಾಸನ: ಭತ್ತದ ಗದ್ದೆಗಳು ಜಲಾವೃತ

ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆಯ ಆರ್ಭಟ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 12:33 IST
Last Updated 22 ಸೆಪ್ಟೆಂಬರ್ 2020, 12:33 IST
ಹಾಸನ ನಗರದಲ್ಲಿ ಮಳೆ ಸುರಿದ ವೇಳೆ ಜನ ಹಾಗೂ ವಾಹನ ಸಂಚಾರದ ದೃಶ್ಯ.
ಹಾಸನ ನಗರದಲ್ಲಿ ಮಳೆ ಸುರಿದ ವೇಳೆ ಜನ ಹಾಗೂ ವಾಹನ ಸಂಚಾರದ ದೃಶ್ಯ.   

ಹಾಸನ: ಮಲೆನಾಡು ಭಾಗದಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಸಕಲೇಶಪುರ, ಹೆತ್ತೂರು, ಕಸಬಾ ಹೋಬಳಿ ಸತ್ತಿಗಾಲ್‌ ಗ್ರಾಮದ ಭತ್ತದ ಗದ್ದೆ ಜಲಾವೃತಗೊಂಡಿದ್ದು, ಜಮೀನಿನಲ್ಲಿ ನೀರು ನಿಂತು ಕೃಷಿ ಚಟುವಟಿಕೆಗೆ ಅಡ್ಡಿ ಉಂಟಾಗಿದೆ. ಕಾಫಿ, ಮೆಣಸು, ಅಡಿಕೆ, ಭತ್ತದ ಬೆಳೆಗಳಿಗೆ ಹಾನಿಯುಂಟಾಗಿದೆ. ಧಾರಾಕಾರ ಮಳೆಯಿಂದಾಗಿ ಕೆಂಪು ಹೊಳೆ ತುಂಬಿ ಹರಿಯುತ್ತಿದ್ದು, ಹಳ್ಳಕೊಳ್ಳಗಳು ಮೈತುಂಬಿವೆ. ಶೀತ ಗಾಳಿ ಜೊತೆಗೆ ಸುರಿಯುವ ಜಡಿ ಮಳೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ.

ಹಾಸನ, ಸಕಲೇಶಪುರ, ಹೆತ್ತೂರು, ಆಲೂರು, ಬೇಲೂರು ಭಾಗದಲ್ಲಿ ಮಂಗಳವಾರವೂ ಜೋರು ಮಳೆಯಾಗಿದೆ. ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಸೀಕೆರೆ, ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಸೋನೆ ಸುರಿಯಿತು.

ADVERTISEMENT

ಹಾಸನ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಮಂಗಳವಾರ ಬೆಳಿಗ್ಗೆ ಬಿಡುವು ನೀಡಿ ಆರಂಭಗೊಂಡ ಮಳೆಯಿಂದ ಜನ ಪಡಿಪಾಟಲು ಪಡುವಂತಾಯಿತು. ಕಚೇರಿಗೆ ಹೋಗುವವರು, ನೌಕರರು ಸಮಸ್ಯೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.