ADVERTISEMENT

‘ವರದಿಗೆ ನಮ್ಮ ವಿರೋಧ ಇಲ್ಲ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 5:37 IST
Last Updated 11 ಡಿಸೆಂಬರ್ 2020, 5:37 IST

ಸಕಲೇಶಪುರ: 'ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ನಮ್ಮಗಳ ಯಾವುದೇ ವಿರೋಧ ಇಲ್ಲ’ ಎಂದು ತಾಲ್ಲೂಕಿನ ಅಗನಿ ಗ್ರಾಮದ ರೈತ ಎ.ಬಿ. ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ.

‘ನಾವುಗಳು ಆತಂಕಪಡುವಂತಹ ಯಾವುದೇ ರೈತ ವಿರೋಧಿ, ಪರಿಸರ ವಿರೋಧಿ ಕಾನೂನು ವರದಿಯಲ್ಲಿ ಇಲ್ಲ. ಹಾಲಿ ಇರುವಂತಹ ರಕ್ಷಿತರ ಅರಣ್ಯಗಳನ್ನೇ ಸೂಕ್ಷ್ಮ ಪರಿಸರ ವಲಯ ಎಂದು ಗುರುತಿಸಲಾಗಿದೆ. ಯಾವುದೇ ಹಿಡುವಳಿ ಭೂಮಿಯನ್ನಾಗಲಿ, ಪಶ್ಚಿಮಘಟ್ಟದ ಅಂಚಿನ ಗ್ರಾಮಗಳನ್ನಾಗಲಿ ಸೂಕ್ಷ್ಮ ವಲಯಕ್ಕೆ ಸೇರಿಸುವ ಪ್ರಸ್ತಾವ ವರದಿಯಲ್ಲಿ ಇಲ್ಲ’ ಎಂದಿದ್ದಾರೆ.

‘ನಮ್ಮ ಅಗನಿ ಗ್ರಾಮವೂ ಸಹ ಸೇರ್ಪಡೆಯಾಗಿದೆ. ಆದರೆ, ಇಡೀ ಗ್ರಾಮ ಸೂಕ್ಷ್ಮ ವಲಯಕ್ಕೆ ಸೇರುವುದಿಲ್ಲ. ಗ್ರಾಮದ ದಾಖಲೆಯಲ್ಲಿ ರಕ್ಷಿತ ಅರಣ್ಯ ಇದ್ದು, ಅದು ಮಾತ್ರ ಸೇರ್ಪಡೆ ಆಗುತ್ತದೆ. ವರದಿಯಲ್ಲಿ ಬೃಹತ್‌ ಕೈಗಾರಿಕೆಗಳನ್ನಾಗಲಿ, ಥರ್ಮಲ್‌ ಫ್ಲಾಂಟ್‌ ನಿರ್ಮಾಣ ಮಾಡಬಾರದು. 20 ಸಾವಿರ ಚದರ ಅಡಿ ಕಟ್ಟಡ ಕಟ್ಟಬಾರದು ಎಂದಿದೆ. ಪಶ್ಚಿಮಘಟ್ಟದಲ್ಲಿ ಯಾರು ಇದನ್ನೆಲ್ಲಾ ಮಾಡುತ್ತಾರೆ. ರಾಸಾಯನಿಕ ಗೊಬ್ಬರ ಬಳಸುವುದನ್ನು ನಿರ್ಬಂಧಿಸಿರುವುದು ಆರಂಭದಲ್ಲಿ ನಮಗೆ ತೊಂದರೆ ಆಗಬಹುದು. ಆದರೆ, ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರವೇ ಆಗಿದೆ. ಸರಿಯಾದ ಮಾಹಿತಿ ಇಲ್ಲದೆ, ಗ್ರಾ.ಪಂ. ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿಕೆ ನೀಡುವುದು, ಪ್ರತಿಭಟನೆ ಮಾಡುವುದು ಸರಿಯಲ್ಲ’ ಎಂದು ಪ‍್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಸರ್ಕಾರ ಕೂಡಲೇ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡಿ ಗೊಂದಲ ನಿವಾರಿಸಬೇಕು. ಈ ಭಾಗದ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.