ಬೇಲೂರು: ಸ್ವಪಕ್ಷದವೇ ಆದ ಇಲ್ಲಿನ ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ವಿರುದ್ಧ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದು, ಜೂನ್ 4ರಂದು ವಿಶೇಷ ಸಭೆ ಇರುವುದಾಗಿ ಮುಖ್ಯಾಧಿಕಾರಿ ಸುಜಯ್ ಕುಮಾರ್, ಸದಸ್ಯರಿಗೆ ಆಹ್ವಾನ ಪತ್ರ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಎ.ಆರ್.ಅಶೋಕ್ ಪದಚ್ಯುತಿಗೊಳಿಸಲು ಕಾಂಗ್ರೆಸ್ ತಾಲ್ಲೂಕು ಘಟಕವು ಮುಂದಾಗಿದೆ. ಉಪಾಧ್ಯಕ್ಷೆ ಉಷಾ ಅಧ್ಯಕ್ಷತೆಯಲ್ಲಿ ಅವಿಶ್ವಾಸ ನಿರ್ಣಯ ಸಭೆ ಕರೆಯಲಾಗಿದ್ದು, ಪುರಸಭೆಯ ಮೂರನೇ ಒಂದರಷ್ಟು ಸದಸ್ಯರು ಸಹಿ ಮಾಡಿ ಮನವಿ ಸಲ್ಲಿಸಿರುವುದರಿಂದ ಈ ಸಭೆ ಕರೆಯಲಾಗಿದೆ ಎಂದು ಆಹ್ವಾನ ಪತ್ರದಲ್ಲಿ ತಿಳಿಸಲಾಗಿದೆ.
ಈ ಮಧ್ಯೆ ಆಪ್ತರು ಹಾಗೂ ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿರುವ ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್, ನ್ಯಾಯಾಲಯದ ಮೊರೆ ಹೋಗಿ ಸಭೆಗೆ ತಡೆಯಾಜ್ಞೆ ತರಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಪ್ಪಂದದಂತೆ ನಿಗದಿತ ಸಮಯದಲ್ಲಿ ಎ.ಆರ್.ಅಶೋಕ್ ರಾಜೀನಾಮೆ ನೀಡಿಲ್ಲ, ನೀಡಲೂ ಒಪ್ಪುತ್ತಿಲ್ಲ ಎಂದು ಅವರ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಅದರಂತೆ ಮೇ 2 ರಂದು ಮೊದಲ ಬಾರಿ ಸಭೆ ಕರೆಯಲಾಗಿತ್ತು. ಕೆಲ ಕಾಂಗ್ರೆಸ್ ಸದಸ್ಯರೇ ಗೊಂದಲ ಸೃಷ್ಟಿಸಿದ್ದರಿಂದ ಸಭೆಯನ್ನು ಮೂಂದೂಡಲಾಗಿತ್ತು.
ಶಾಸಕ ಎಚ್.ಕೆ.ಸುರೇಶ್, ಎ.ಆರ್.ಅಶೋಕ್ ಪರವಾಗಿ ನಿಂತು ಜೆಡಿಎಸ್‌ನ 5 , ಬಿಜೆಪಿಯ ಒಬ್ಬ ಸದಸ್ಯರನ್ನು ಜೊತೆಯಲ್ಲಿಯೇ ಸಭೆಗೆ ಕರೆದುಕೊಂಡು ಬಂದಿದ್ದರು. ಅವಿಶ್ವಾಸ ನಿರ್ಣಯದಲ್ಲಿ ಎ.ಆರ್.ಅಶೋಕ್ ಜಯವಾಗಿದ್ದಾರೆ ಎಂದು ಪತ್ರ ನೀಡುವಂತೆ ಒತ್ತಾಯ ಮಾಡಿದ್ದರು.
ಆದರೆ, ಆಗ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷೆ ಉಷಾ ಅವರು ಸಭೆಯನ್ನು ಮುಂದೂಡಿರುವುದಾಗಿ ಹೇಳಿದ್ದರಿಂದ ಈಗ ಮತ್ತೊಮ್ಮೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಏನಾಗುತ್ತದೆ ಎಂಬ ಕುತೂಹಲ ಪಟ್ಟಣದ ಜನತೆಯಲ್ಲಿ ಮನೆ ಮಾಡಿದೆ.
ಮೇ 2 ರಂದು ನಡೆದ ಸಭೆಯ ವೇಳೆ ಎ.ಆರ್.ಅಶೋಕ್ ಜೊತೆ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಸದಸ್ಯರಾದ ಜಮೀಲಾ, ದಿವ್ಯಾ, ಸೌಮ್ಯಾ, ಅಶೋಕ್ ನಾಯಕ್, ಪಕ್ಷ ವಿಪ್ ನೀಡಿದ್ದರೂ ಸಭೆಗೆ ಭಾರದೇ ಗೈರಾಗಿದ್ದರು. ಹೀಗಾಗಿ ಇವರನ್ನು ಸದಸ್ಯತ್ವದಿಂದ ಅನರ್ಹ ಮಾಡಲು ಪಕ್ಷ ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಈ ನಾಲ್ವರು ಸದಸ್ಯರ ಮನವೊಲಿಸುವಲ್ಲಿ ಪಕ್ಷದ ನಾಯಕರು ಯಶಸ್ವಿಯಾಗಿದ್ದು, ಅವಿಶ್ವಾಸ ನಿರ್ಣಯದ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಆಂತರಿಕ ಒಪ್ಪಂದದಂತೆ ನಡೆದುಕೊಳ್ಳದೇ ವಿರೋಧ ಪಕ್ಷದವರ ಜೊತೆ ಸೇರಿ ಅಶೋಕ್ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಅಶೋಕ್ ವಿರುದ್ಧ ಮತ ಚಲಾಯಿಸುವಂತೆ ಪಕ್ಷದ ಸದಸ್ಯರಿಗೆ ವಿಪ್ ನೀಡಲಾಗುತ್ತದೆ
- ಎಂ.ಜೆ. ನಿಶಾಂತ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ
25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ ಈಗ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿರುವುದು ಬೇಸರ ತಂದಿದೆ. ಪಟ್ಟಣದ ಜನತೆಗಾಗಿ ಉತ್ತಮ ಕೆಲಸ ಮಾಡಿರುವ ತೃಪ್ತಿ ನನಗಿದೆ
-ಎ.ಆರ್.ಅಶೋಕ್ ಪುರಸಭೆ ಅಧ್ಯಕ್ಷ
ಹೆಚ್ಚುತ್ತಿರುವ ಲೆಕ್ಕಾಚಾರ ಪುರಸಭೆಯು 23 ಸದಸ್ಯ ಬಲ ಹೊಂದಿದ್ದು ಕಾಂಗ್ರೆಸ್ 17 ಜೆಡಿಎಸ್ 5 ಬಿಜೆಪಿಯ 1 ಸದಸ್ಯರಿದ್ದಾರೆ. ಶಾಸಕ ಮತ್ತು ಸಂಸದರು ಮತ ಚಲಾವಣೆ ಮಾಡಬಹುದಾಗಿದೆ. ಕಾಂಗ್ರೆಸ್‌ನ 17 ಸದಸ್ಯರಲ್ಲಿ ಎ.ಆರ್.ಅಶೋಕ್ ಬಿಟ್ಟರೂ ಉಳಿದ 16 ಸದಸ್ಯರು ಸಂಸದರ ಒಂದು ಮತ ಅವಿಶ್ವಾಸ ನಿರ್ಣಯದ ಪರವಾಗಿ ಚಲಾವಣೆಯಾದರೆ ಎ.ಆರ್.ಅಶೋಕ್ ಅಧ್ಯಕ್ಷ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.