ADVERTISEMENT

ಜೋಳಕ್ಕಿಂತ ಹುಲುಸಾಗಿ ಬೆಳೆದ ಕಳೆ

ಹುಲ್ಲಿನ ಜೊತೆ ಜೋಳವನ್ನೂ ಕತ್ತರಿಸುವ ಸ್ಥಿತಿ: ರೈತರಿಗೆ ನಷ್ಟದ ಆತಂಕ

ಎಂ.ಪಿ.ಹರೀಶ್
Published 14 ಜುಲೈ 2025, 6:53 IST
Last Updated 14 ಜುಲೈ 2025, 6:53 IST
ಆಲೂರು ತಾಲ್ಲೂಕು ನಾಕಲಗೂಡು ರೈತ ಆನಂದ್ ಅವರ ಹೊಲದಲ್ಲಿ ಜೋಳದ ಜೊತೆ ಬೃಹತ್ತಾಗಿ ಕಳೆ ಬೆಳೆದಿರುವುದು.
ಆಲೂರು ತಾಲ್ಲೂಕು ನಾಕಲಗೂಡು ರೈತ ಆನಂದ್ ಅವರ ಹೊಲದಲ್ಲಿ ಜೋಳದ ಜೊತೆ ಬೃಹತ್ತಾಗಿ ಕಳೆ ಬೆಳೆದಿರುವುದು.   

ಆಲೂರು: ತಿಂಗಳು ನಿರಂತರ ಮಳೆಯಾಗಿದ್ದರಿಂದ ಹೊಲದಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆ ಜೋಳದ ಜೊತೆಯಲ್ಲಿ ಹುಲ್ಲು ಬೆಳೆಯುತ್ತಿದ್ದು, ಜೋಳದ ಬೆಳೆ ಕೈಗೆಟಕದಂತಾಗಿದೆ.

ಒಂದೂವರೆ ತಿಂಗಳ ಹಿಂದೆ ಹದ ಮಳೆಯಾಯಿತು. ಈ ಸಂದರ್ಭದಲ್ಲಿ ಹಲವು ರೈತರು ಮಾಗಿ ಉಳುಮೆ ಮಾಡಿ ಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿದ ಒಂದು ವಾರದ ನಂತರ ಜೋಳ ಚೆನ್ನಾಗಿ ಬಂದಿತ್ತು.

ಒಂದು ವಾರದಲ್ಲಿ ಹೊಲದಲ್ಲಿ ಕಳೆ ತೆಗೆದು ಗೊಬ್ಬರ ಹಾಕಬೇಕಾಗಿತ್ತು. ಆದರೆ ಅಷ್ಟರಲ್ಲಿ ಮಳೆ ಪ್ರಾರಂಭವಾಗಿದ್ದು, ನಿರಂತರವಾಗಿ ಒಂದು ತಿಂಗಳು ಸುರಿಯಿತು., ಇದರಿಂದ ಜೋಳದ ಜೊತೆಗೆ ಕಳೆಯ ಹುಲ್ಲು ಬೃಹತ್ತಾಗಿ ಬೆಳೆಯಿತು.

ADVERTISEMENT

ಕಳೆ ನಾಶ ಮಾಡಲು ಸಮಯಾಕಾಶ ದೊರಕದೇ, ಕೃಷಿ ಕೆಲಸ ಮಾಡಲು ಸಾಧ್ಯವಾಗದೆ ರೈತರು ಕೈ ಚೆಲ್ಲಿದರು. ಈಗ ಜೋಳದೊಡನೆ ಬೃಹತ್ತಾಗಿ ಕಳೆ ಬಂದಿದೆ. ಕಳೆಯಿಂದ ಜೋಳವನ್ನು ಬೇರ್ಪಡಿಸಲು ಸಾಧ್ಯವಾಗುತ್ತಿಲ್ಲ. ಹುಲ್ಲಿನೊಂದಿಗೆ ಜೋಳವನ್ನು ಕೊಯ್ಲು ಮಾಡಿ ಜಾನುವಾರುಗಳಿಗೆ ಉಣ ಬಡಿಸುವ ಪರಿಸ್ಥಿತಿ ತಲೆದೋರಿದೆ ಎಂದು ರೈತರು ಹೇಳುತ್ತಿದ್ದಾರೆ.

ಹೊಲದ ಉಳುಮೆ, ಜೋಳದ ಬೀಜ, ಗೊಬ್ಬರ ಬೆರೆಸಿ ಬಿತ್ತುವ ಕಾರ್ಯ ಸೇರಿದಂತೆ ಈಗಾಗಲೇ ಎಕರೆಗೆ ₹ 10ಸಾವಿರದಿಂದ ₹15 ಸಾವಿರ ಖರ್ಚಾಗಿದೆ. ಆದರೆ ಮಳೆಯಿಂದಾಗಿ ಯಾವುದೇ ಪ್ರತಿಫಲ ಸಿಗದಂತಾಗಿದೆ ಎಂದು ರೈತರು ಹತಾಶರಾಗಿದ್ದಾರೆ.

ಎರಡು ದಶಕಗಳ ಹಿಂದೆ ಮಾರ್ಚ್‌ನಲ್ಲಿ ಬಹುತೇಕ ಮಳೆಯಾಗುತ್ತಿತ್ತು. ಆಗ ಅಡಿಗಾರು ಉಳುಮೆ ಮಾಡುತ್ತಿದ್ದರು. ಸುಡು ಬಿಸಿಲಿನಲ್ಲಿ ಕಳೆ ಸಂಪೂರ್ಣ ನಾಶವಾಗುತ್ತಿತ್ತು. ಮೇ ತಿಂಗಳಲ್ಲಿ ಬಿತ್ತನೆ ಮಾಡುತ್ತಿದ್ದರು. ಉತ್ತಮ ಫಸಲು ದೊರಕುತ್ತಿತ್ತು.

ಆದರೆ ಇತ್ತೀಚೆಗೆ ಯಾಂತ್ರಿಕ ಕೃಷಿಗೆ ಮಾರು ಹೋಗಿರುವ ರೈತರು, ಉಳುಮೆ ಮಾಡಿದ ಸಂದರ್ಭದಲ್ಲಿ ಬಿತ್ತನೆ ಮಾಡುತ್ತಿದ್ದು, ಮುಂದಿನ ಕೃಷಿ ಚಟುವಟಿಕೆಗೆ ಅವಕಾಶ ಸಿಗದಿದ್ದರೆ ಇಂತಹ ಪರಿಸ್ಥಿತಿ ತಲೆದೋರುತ್ತದೆ ಎಂದು ಹಿರಿಯ ಕೃಷಿಕರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

ಜೋಳ ಬಿತ್ತನೆ ಮಾಡಿ ವಾರ ಮಳೆಯಿಲ್ಲದೆ ಉತ್ತಮ ವಾತಾವರಣ ಇತ್ತು. ಇನ್ನೇನು ಮುಂದಿನ ಕೆಲಸ ಮಾಡುವಷ್ಟರಲ್ಲಿ ಮಳೆ ಪ್ರಾರಂಭವಾಯಿತು. ಈವರೆಗೂ ಮಳೆ ಬಿಟ್ಟಿಲ್ಲ. ಜೋಳದ ಜೊತೆ ಕಳೆ ಹುಲ್ಲು ಬೆಳೆದು ನಿಂತಿದೆ.
ಆರ್. ಆನಂದ ನಾಕಲಗೂಡು ರೈತ
ನಿರಂತರ ತಿಂಗಳು ಮಳೆ ಆದ್ದರಿಂದ ಜೋಳದ ಜೊತೆ ಕಳೆ ಸಹ ಬೆಳೆದು ನಿಂತಿದೆ. ಈಗ ಏನು ಮಾಡಲೂ ಸಾಧ್ಯವಿಲ್ಲ. ಅಡಿಗಾರು ಮಾಗಿ ಉಳುಮೆ ಮಾಡಿ ಕಳೆ ನಾಶವಾದ ನಂತರ ಹದ ನೋಡಿಕೊಂಡು ಬಿತ್ತನೆ ಮಾಡಬೇಕು.
ರಮೇಶಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.