
ಎಚ್.ಡಿ. ಕುಮಾರಸ್ವಾಮಿ
ಚನ್ನರಾಯಪಟ್ಟಣ: ‘ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಏನು ಮಾಡಿದೆ ಎನ್ನುವುದು ಗೊತ್ತಿದೆ. ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡುವುದಕ್ಕೆ ಕಾಂಗ್ರೆಸ್‌ನವರಿಗೆ ಯಾವ ನೈತಿಕತೆ ಇದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಕಸಿತ ಭಾರತ ಸಾಕಾರಕ್ಕೆ ಸಮಗ್ರ ಆಯವ್ಯಯವನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಎಲ್ಲ ರಾಜ್ಯಗಳಿಗೂ ಆದ್ಯತೆ ಕೊಟ್ಟಿದ್ದಾರೆ’ ಎಂದರು.
‘ಪ್ರತಿಯೊಂದು ಜಿಲ್ಲೆ, ರಾಜ್ಯಕ್ಕೆ ಕಾರ್ಯಕ್ರಮ ಘೋಷಣೆ ಮಾಡುವ ಬದಲು ಸಮಗ್ರ ಭಾರತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಘೋಷಣೆ ಮಾಡಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳೂ, ಎಲ್ಲ ರಾಜ್ಯಗಳ, ಎಲ್ಲ ಜಿಲ್ಲೆಗಳ ಜನರಿಗೂ ಮುಟ್ಟುತ್ತವೆ’ ಎಂದು ಹೇಳಿದರು.
‘ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಪ್ರಧಾನಿ ಮುಂದೆ ಮಾತನಾಡುವ ಶಕ್ತಿ ಇಲ್ಲ ಎಂದು ಹೇಳುತ್ತಾರೆ. ನಾನು ಎರಡು ಖಾತೆಗಳ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ನೆರೆಯ ಆಂಧ್ರ ಪ್ರದೇಶದಲ್ಲಿ ವೈಜಾಗ್ ಸ್ಟೀಲ್ ಕಾರ್ಖಾನೆಯ ಖಾಸಗೀಕರಣಕ್ಕೆ ಕೇಂದ್ರ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಒಮ್ಮೆ ಸಂಪುಟದಲ್ಲಿ ಕೈಗೊಂಡ ನಿರ್ಧಾರವನ್ನು ಮತ್ತೆ ಪರಿಶೀಲನೆ ಮಾಡಿದ ಉದಾಹರಣೆ ಇಲ್ಲ. ಸಾಮಾನ್ಯವಾಗಿ ಮಾಡುವುದೂ ಇಲ್ಲ. ಸಚಿವನಾದ ಮೇಲೆ ನಾನು ಆ ಕಾರ್ಖಾನೆಗೆ ಭೇಟಿ ಕೊಟ್ಟೆ. ಅಲ್ಲಿನ ಪರಿಸ್ಥಿತಿ ಖುದ್ದು ಅವಲೋಕನ ಮಾಡಿದೆ. ನಂತರ ಮೋದಿ ಅವರಿಗೆ ಮನವಿ ಮಾಡಿದೆ. ಆರ್ಥಿಕ ಸಚಿವರ ಮನವೊಲಿಸಿ ಆ ಕಾರ್ಖಾನೆಗೆ ಜೀವ ಕೊಟ್ಟಿದ್ದೇನೆ. ಉಕ್ಕು ಕ್ಷೇತ್ರದಲ್ಲಿ ಆ ಕಾರ್ಖಾನೆಯನ್ನು ನಂಬರ್ ವನ್ ಸ್ಥಾನಕ್ಕೆ ತರುತ್ತೇವೆ. ನನ್ನ ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ವಿಶಾಖಪಟ್ಟಣಕ್ಕೆ ಹೋಗಿ ನೋಡಲಿ’ ಎಂದು ತಿರುಗೇಟು ನೀಡಿದರು.
‘ನರೇಂದ್ರ ಮೋದಿ ಯಾವಾಗಲೂ ವಿಕಸಿತ, ಆತ್ಮನಿರ್ಭರ ಭಾರತ ಬಗ್ಗೆ ಹೇಳುತ್ತಾರೆ. ಸ್ವಾತಂತ್ರ್ಯದ ಶತಮಾನೋತ್ಸವ ಆಚರಣೆ ಮಾಡುವುದರೊಳಗೆ ನಮ್ಮ ದೇಶ ವಿಶ್ವದಲ್ಲಿ ಅಗ್ರ ಸ್ಥಾನಕ್ಕೆ ಏರಬೇಕು. ಅದಕ್ಕೆ ಅನೇಕ ಕಾರ್ಯಕ್ರಮ ತರಲು ಮೋದಿ ಪ್ರಯತ್ನ ಮಾಡುತ್ತಿದ್ದಾರೆ. ಈ ಬಾರಿ ವಿಶೇಷವಾಗಿ ನಾಲ್ಕು ಕ್ಷೇತ್ರಗಳಿಗೆ ಉತ್ತೇಜನ ನೀಡಿದ್ದಾರೆ. ಬಡತನ, ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರು ಸ್ವಾವಲಂಬಿಯಾಗಲು, ಆರ್ಥಿಕ ಶಕ್ತಿ ತುಂಬಲು ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ’ ಎಂದು ಹೇಳಿದರು.
‘ಹಾಸನದಲ್ಲಿ ವಿಮಾನ ನಿಲ್ದಾಣಕ್ಕೆ ನಾಗರಿಕ ವಿಮಾನಯಾನ ಖಾತೆ ಸಚಿವರ ಜೊತೆ ಚರ್ಚಿಸಿ, ನೆರವು ಕೊಡಿಸಲು ಪ್ರಯತ್ನಿಸಲಾಗುವುದು. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು’ ಎಂದರು.
‘ವಿಮಾನ ನಿಲ್ದಾಣ ಆಗಬೇಕು ಎಂಬುದು ಎಚ್.ಡಿ. ದೇವೇಗೌಡರ ಕನಸು. ಅದನ್ನು ನನಸು ಮಾಡಲಾಗುವುದು. ವಿಮಾನ ನಿಲ್ದಾಣದಿಂದ ರೈತರು ಬೆಳೆದ ಬೆಳೆ ರಫ್ತು ಮಾಡಲು ಅನುಕೂಲವಾಗುತ್ತದೆ’ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಇದ್ದರು.
ಮಾರ್ಚ್‌ನಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡುತ್ತಾರೆ. ಆಗ ನೋಡೋಣ ಇವರು ಎಷ್ಟು ಜಿಲ್ಲೆಗಳಿಗೆ ತಾಲ್ಲೂಕುಗಳಿಗೆ ಏನೇನು ಕೊಡುತ್ತಾರೆ.ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.