ADVERTISEMENT

ಹಾಸನ: ಸಾಕಾರವಾದೀತೇ ವಿಮಾನ ನಿಲ್ದಾಣ, ಐಐಟಿ ಕನಸು

ಕೇಂದ್ರ ಬಜೆಟ್‌ ಇಂದು: ತವರು ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ನಿರೀಕ್ಷೆ

ಪ್ರಜಾವಾಣಿ ವಿಶೇಷ
Published 23 ಜುಲೈ 2024, 4:55 IST
Last Updated 23 ಜುಲೈ 2024, 4:55 IST
ಹಾಸನದ ಬೂವನಹಳ್ಳಿ ವಿಮಾನ ನಿಲ್ದಾಣದ ರನ್‌ವೇ ನಿರ್ಮಾಣ ಕಾಮಗಾರಿ ಕುಂಟುತ್ತ ಸಾಗಿದೆ
ಹಾಸನದ ಬೂವನಹಳ್ಳಿ ವಿಮಾನ ನಿಲ್ದಾಣದ ರನ್‌ವೇ ನಿರ್ಮಾಣ ಕಾಮಗಾರಿ ಕುಂಟುತ್ತ ಸಾಗಿದೆ   

ಹಾಸನ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಮೂರನೇ ಬಾರಿಗೆ ಅಧಿಕಾರ ಹಿಡಿದಿದ್ದು, ಮಂಗಳವಾರ ಮೊದಲ ಬಜೆಟ್ ಮಂಡನೆ ಆಗಲಿದೆ. ಈ ಬಾರಿ ಕೇಂದ್ರದಲ್ಲಿ ಜಿಲ್ಲೆಯ ಎಚ್‌.ಡಿ.ಕುಮಾರಸ್ವಾಮಿ ಸಚಿವರಾಗಿದ್ದು, ಈ ಬಾರಿಯಾದರೂ, ಜಿಲ್ಲೆಗೆ ಒಂದಿಷ್ಟು ಯೋಜನೆಗಳು ಬರಲಿವೆ ಎನ್ನುವ ನಿರೀಕ್ಷೆಗಳು ಜನರಲ್ಲಿ ಗರಿಗೆದರಿವೆ.

ಹಲವು ವರ್ಷಗಳಿಂದ ಜಿಲ್ಲೆಯ ಹಲವು ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಅವುಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಹೊಸ ಯೋಜನೆಗಳು ಜಿಲ್ಲೆಗೆ ಸಿಗಬಹುದು ಎನ್ನುವ ನಿರೀಕ್ಷೆ ಜನರಲ್ಲಿದೆ.

ಬಡವರ ಊಟಿ ಎಂದೇ ಪ್ರಸಿದ್ಧಿಯಾಗಿರುವ ಜಿಲ್ಲೆಯು ಮಲೆನಾಡು ಅರೆ ಮಲೆನಾಡು ಬಯಲು ಸೀಮೆ ಭೌಗೋಳಿಕ ಲಕ್ಷಣ ಹೊಂದಿದೆ. ಪ್ರವಾಸೋದ್ಯಮ, ಕೈಗಾರಿಕೆ, ಕೃಷಿ ಸೇರಿದಂತೆ ನಾನಾ ವಲಯಗಳಿಗೆ ಪೂರಕ ವಾತಾವರಣ ಇದೆ.

ADVERTISEMENT

ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕುಂಟುತ್ತ ಸಾಗಿರುವ ಬೂವನಹಳ್ಳಿ ವಿಮಾನ ನಿಲ್ದಾಣ ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ಈ ಬಾರಿಯ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹಾಸನದ ರೈಲ್ವೆ ಮೇಲ್ಸೇತುವೆ ಒಂದು ಬದಿಯ ರಸ್ತೆ ಕಾಮಗಾರಿ ಮುಗಿದಿದ್ದು, ಮತ್ತೊಂದು ಬದಿ ಕಾಮಗಾರಿಗೆ ₹ 48 ಕೋಟಿ ಅನುದಾನ ಒದಗಿಸುವುದು, ಹಾಸನ -ಚಿಕ್ಕಮಗಳೂರು ರೈಲ್ವೆ ಮಾರ್ಗ, ಹೊಸ ರೈಲು ಮಾರ್ಗ, ಹೆಚ್ಚುವರಿ ರೈಲುಗಳ ಓಡಾಟಕ್ಕೆ ಅನುಮತಿ ಸಿಗಬಹುದು ಎಂದು ಜನರು ನಿರೀಕ್ಷಿಸುತ್ತಿದ್ದಾರೆ.

ಶಿಲ್ಪಕಲೆಗಳ ತವರೂರು ಬೇಲೂರು, ಹಳೇಬೀಡು, ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ್ದು, ಇವುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರವಾಸೋದ್ಯಮ ಉತ್ತೇಜನದೊಂದಿಗೆ ಅಗತ್ಯ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಬಹುದು ಎಂಬ ಆಶಯವನ್ನು ಇಲ್ಲಿನ ಜನರು ವ್ಯಕ್ತಪಡಿಸಿದ್ದಾರೆ.

ದಶಕಗಳ ಬೇಡಿಕೆಯಾದ ಐಐಟಿ ಸ್ಥಾಪನೆ ಆಗಬೇಕಿದೆ. ಈಗಾಗಲೇ ಜಮೀನು ಗುರುತಿಸಿದ್ದು, ಕೇಂದ್ರದ ಅನುಮತಿಗೆ ಕಾಯಲಾಗುತ್ತಿದೆ. ಬಿಜೆಪಿ– ಜೆಡಿಎಸ್ ಮೈತ್ರಿಯಾಗಿದ್ದು, ಎಚ್.ಡಿ. ಕುಮಾರಸ್ವಾಮಿ ತಮ್ಮ ತವರೂರಾದ ಹಾಸನ ಜಿಲ್ಲೆಗೆ ಐಐಟಿ, ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬಹುದು ಎಂದು ಜನರು ಆಶಿಸುತ್ತಿದ್ದಾರೆ.

ಹಾಸನ -ಬಿಳಿಕೆರೆ ನೂತನ ರಾಷ್ಟ್ರೀಯ ಹೆದ್ದಾರಿಗೆ ಪೂರಕ ಅನುದಾನ, ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ ಏರಿಸುವ ಅಥವಾ ಸುರಂಗ ಮಾರ್ಗ ಯೋಜನೆಗಳ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ ಆಗಬಹುದು ಎಂಬ ನಿರೀಕ್ಷೆ ಇದೆ.

ಜಿಲ್ಲೆಯ ಕಾಫಿ ಬೆಳೆಗಾರರ ಹಲವು ವರ್ಷಗಳ ಬೇಡಿಕೆಯಾದ ವಿಶೇಷ ಪ್ಯಾಕೇಜ್ ಘೋಷಣೆ, ಸಾಲದ ಮೇಲಿನ ಬಡ್ಡಿಮನ್ನಾ ಬಗ್ಗೆ ಬಹುತೇಕ ಕಾಫಿ ಬೆಳೆಗಾರರಲ್ಲಿ ನಿರೀಕ್ಷೆಯಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅದು ಈಡೇರುವ ಸಾಧ್ಯತೆಗಳಿವೆ. ಈ ಸಂಬಂಧ ಹಲವು ವರ್ಷಗಳಿಂದ ಕಾಫಿ ಬೆಳೆಗಾರರ ಸಂಘವು, ಕೇಂದ್ರ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ನೀಡುತ್ತಲೇ ಬಂದಿದ್ದಾರೆ.

ವಿಶೇಷ ಪ್ಯಾಕೇಜ್ ಸಾಲದ ಮೇಲಿನ ಬಡ್ಡಿಮನ್ನಾ ಭೂಕುಸಿತ ನೆರೆ ಸೇರಿದಂತೆ ಪರಿಹಾರವನ್ನು ಹೆಕ್ಟೇರ್‌ಗೆ ₹50ಸಾವಿರಕ್ಕೆ ಏರಿಸಬೇಕು. ಸಕಲೇಶಪುರದಲ್ಲಿ ಕಾಫಿ ಮ್ಯೂಸಿಯಂ ತೆರೆಯಬೇಕು

–ಕೃಷ್ಣಪ್ಪ ಕಾಫಿ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ

ಮಯೂರ ಹೊಟೇಲ್ ಅಭಿವೃದ್ಧಿ ಆಗಬೇಕು. ಹೆಚ್ಚುವರಿ ಕೊಠಡಿ ನಿರ್ಮಾಣ ಆಗಬೇಕು. ಶೌಚಾಲಯ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕಾಗಿದೆ

–ಎಚ್.ಎಂ. ಬಸವರಾಜು ಇತಿಹಾಸ ಪ್ರಾಧ್ಯಾಪಕ ಹಳೇಬೀಡು

ಬೇಲೂರು ಯುನೆಸ್ಕೋ ಪಟ್ಟಿಗೆ ಸೇರಿದ್ದು ಅನುಮಭವಿಗಳಿಂದ ಮಾಹಿತಿ ಪಡೆದು ಅದಕ್ಕೆ ಅನುಗುಣವಾಗಿ ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸುವ ಅಗತ್ಯವಿದೆ

–ಡಾ.ಶ್ರೀವತ್ಸ ಎಸ್.ವಟಿ ಸಂಶೋಧಕ ಬೇಲೂರು

ಆನೆ ಕಾರಿಡಾರ್‌ಗೆ ಚಾಲನೆ ನೀಡಿ ಮಲೆನಾಡಿನ ಜನರ ಸಮಸ್ಯೆಯಾದ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಿದ್ದು ಈ ನಿಟ್ಟಿನಲ್ಲಿಯೂ ಈ ಬಜೆಟ್‌ನಲ್ಲಿ ಉತ್ತಮ ಸ್ಪಂದನೆ ದೊರೆಯಬಹುದು ಎನ್ನುವ ಕಾತುರ ರೈತಾಪಿ ಜನರದ್ದು. ಸಕಲೇಶಪುರ ಆಲೂರು ಬೇಲೂರು ರೈತರು ಹಾಗೂ ಕಾಫಿ ಬೆಳೆಗಾರರ ಬಹು ವರ್ಷಗಳ ಬೇಡಿಕೆಯಾದ ಆನೆ ಕಾರಿಡಾರ್ ನಿರ್ಮಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅಲ್ಪಸ್ವಲ್ಪ ಅನುದಾನವನ್ನಾದರೂ ಬಿಡುಗಡೆ ಮಾಡಿ ಯೋಜನೆಗೆ ಚಾಲನೆ ನೀಡುವುದು ಅವಶ್ಯಕವಾಗಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌ಕುಮಾರ್‌ ಹೇಳಿದ್ದಾರೆ. ಪ್ರತಿ ಬಾರಿಯ ಬಜೆಟ್‌ನಲ್ಲಿ ಈ ಬೇಡಿಕೆ ಹುಸಿಯಾಗುತ್ತಿದ್ದು ಕಾಡಾನೆ ಉಪಟಳದಿಂದ ಬೆಳೆ ಹಾನಿ ಜೊತೆಗೆ ಪ್ರಾಣ ಹಾನಿಯೂ ಹೆಚ್ಚುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.