ADVERTISEMENT

ತ್ವರಿತ ಗತಿಯಲ್ಲಿ ಕೆಲಸ ಮಾಡಿ: ಸೂಚನೆ

ವಿವಿಧ ಕಾಮಗಾರಿಗಳ ವೀಕ್ಷಿಸಿದ ಸಚಿವ ರೇವಣ್ಣ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 15:52 IST
Last Updated 24 ಡಿಸೆಂಬರ್ 2018, 15:52 IST
ಹಾಸನ ನಗರದ ಹೊಸ ಬಸ್‌ ನಿಲ್ದಾಣ ಸಮೀಪದ ರೈಲ್ವೆಗೇಟ್‌ ಬಳಿ ನಡೆಯುತ್ತಿರು ಕಾಮಗಾರಿಗಳನ್ನು ಅಧಿಕಾರಿಗಳ ಜೊತೆ ವೀಕ್ಷಿಸಿದರು.
ಹಾಸನ ನಗರದ ಹೊಸ ಬಸ್‌ ನಿಲ್ದಾಣ ಸಮೀಪದ ರೈಲ್ವೆಗೇಟ್‌ ಬಳಿ ನಡೆಯುತ್ತಿರು ಕಾಮಗಾರಿಗಳನ್ನು ಅಧಿಕಾರಿಗಳ ಜೊತೆ ವೀಕ್ಷಿಸಿದರು.   

ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಭಾನುವಾರ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

ಎಪಿಎಂಸಿ ಮುಂಭಾಗ ಬಿ.ಎಂ. ರಸ್ತೆಯಿಂದ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ 80 ಅಡಿ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿಲು ಕ್ರಮಕೈಗೊಳ್ಳಬೇಕು ಎಂದು ಎಂಜಿನಿಯರುಗಳಿಗೆ ಸೂಚನೆ ನೀಡಿದರು.

ನಗರದ ಬಸ್ ನಿಲ್ದಾಣದ ಸಮೀಪ ರೈಲ್ವೆ ಗೇಟ್‌ನ ಬಳಿ ನಿರ್ಮಾಣವಾಗಲಿರುವ ರೈಲ್ವೆ ಮೇಲ್ಸೆತುವೆ ಸ್ಥಳಕ್ಕೂ ಭೇಟಿ ನೀಡಿದ್ದ ಸಚಿವ ರೇವಣ್ಣ , ಮೇಲ್ಸೆತುವೆಯ ಆರಂಭ ಹಾಗೂ ಬಸ್ ನಿಲ್ದಾಣಕ್ಕೆ ಸಂಪರ್ಕ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಪಡೆದು ಕೆಲಸ ಸಲಹೆಗಳನ್ನು ನೀಡಿದರು.

ADVERTISEMENT

ಹೊಳೆನರಸೀಪುರ ರಸ್ತೆಯಿಂದ ರೈಲು ನಿಲ್ದಾಣದ ಕಡೆಗೆ ರೈಲ್ವೆ ಹಳಿ ಪಕ್ಕವೇ ನಿರ್ಮಾಣವಾಗುತ್ತಿರುವ ಸಂಪರ್ಕ ರಸ್ತೆ ಕಾಮಗಾರಿ ಆರಂಭವಾಗಿ ಅರ್ಧಕ್ಕೆ ನಿಂತಿರುವ ಬಗ್ಗೆ ಹಾಗೂ ಜಿಲ್ಲಾಧಿಕಾರಿ ಕಚೇರಿ ನಿವಾಸದ ಪಕ್ಕ ನರ್ಸಿಂಗ್ ಕಾಲೇಜು ಮುಂಭಾಗದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವಂತೆ ಇಂಜಿನಿಯರುಗಳಿಗೆ ತಾಕೀತು ಮಾಡಿದರು.

ಹಾಸನ - ಬೇಲೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ರಸ್ತೆಯ ಕೆಲವೆಡೆ ತಿರುವುಗಳನ್ನು ನೇರಗೊಳಿಸುವ ಬಗ್ಗೆಯೂ ಪರಿಶೀಲನೆ ನಡೆಸಿದರು. ಸಚಿವರು ಪರಿಶೀಲನೆ ನಡೆಸುವ ವೇಳೆ ದೆಹಲಿಯಿಂದ ಆಗಮಿಸಿದ್ದ ರೈಲ್ವೆ ಇಲಾಖೆ ಎಂಜಿನಿಯರುಗಳು , ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರುಗಳು, ಜಿಲ್ಲಾಧಿಕಾರಿ ಹಾಜರಿದ್ದರು.

ಕಾಮಗಾರಿಗಳ ಪರಿಶೀಲನೆಯ ನಂತರ ಸಚಿವ ರೇವಣ್ಣ ಅವರು ಪ್ರವಾಸಿ ಮಂದಿರದಲ್ಲಿ ಕೆಲಕಾಲ ಎಂಜಿನಿಯರುಗಳೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.