ADVERTISEMENT

ಹಳೇಬೀಡು: ಜೈನ ಬಸದಿಯಲ್ಲಿ ಪೂಜೆ ಪುನರಾರಂಭ

ಮೂರು ದಿನದಿಂದ ನಿಂತಿದ್ದ ನಿತ್ಯ ಪೂಜೆ; ಆತಂಕಗೊಂಡಿದ್ದ ಜೈನ ಸಮಾಜದವರು

ಎಚ್.ಎಸ್.ಅನಿಲ್ ಕುಮಾರ್
Published 28 ಏಪ್ರಿಲ್ 2022, 5:12 IST
Last Updated 28 ಏಪ್ರಿಲ್ 2022, 5:12 IST
ಹಳೇಬೀಡಿನ ಬಸ್ತಿಹಳ್ಳಿಯ ಹೊಯ್ಸಳರ ಕಾಲದ ಜೈನ ಬಸದಿ
ಹಳೇಬೀಡಿನ ಬಸ್ತಿಹಳ್ಳಿಯ ಹೊಯ್ಸಳರ ಕಾಲದ ಜೈನ ಬಸದಿ   

ಹಳೇಬೀಡು: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳ ಆದೇಶದಂತೆ ಹಳೇಬೀಡಿನ ಬಸ್ತಿಹಳ್ಳಿಯ ಜೈನ ಬಸದಿಗಳಲ್ಲಿ ಮೂರು ದಿನದಿಂದ ನಿಲ್ಲಿಸಿದ್ದ ನಿತ್ಯ ಪೂಜೆ ಮುಂದುವರಿಸಲು ಬುಧವಾರ ಅವಕಾಶ ದೊರಕಿತು. ಆತಂಕಗೊಂಡಿದ್ದ ಜೈನ ಸಮಾಜದವರು ಈಗ ಸಂತಸ ವ್ಯಕ್ತಪಡಿಸಿದ್ದಾರೆ.

ಹೊಯ್ಸಳರ ಕಾಲದ ಬಸ್ತಿಹಳ್ಳಿಯ ಮೂರು ಜೈನ ಬಸದಿಗಳು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಡಳಿತಕ್ಕೆ ಒಳಪಟ್ಟಿವೆ. ಜಿನ್ನೆ ದೇವರು ಎಂಬ ಹೆಸರಿನಿಂದ ಬಸದಿಗಳಲ್ಲಿ ಅನಾದಿಕಾಲದಿಂದಲೂ ಪೂಜೆ ನಡೆಯುತ್ತಿದೆ. ಹಳೇಬೀಡು ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಸೇರಲಿರುವುದರಿಂದ ಪೂಜೆ ಇರುವ ಹಾಗೂ ಪೂಜೆ ಇಲ್ಲದಿರುವ ಸ್ಮಾರಕಗಳನ್ನು ಪಟ್ಟಿ ಮಾಡುವ ಕಾರ್ಯ ನಡೆಯುತ್ತಿದೆ. ಪೂಜಾ ಸ್ಮಾರಕ ಎಂಬುದಕ್ಕೆ ಪರಂಪರೆ ಇಲಾಖೆಯಲ್ಲಿ ದಾಖಲೆ ಇಲ್ಲ ಎಂಬ ಕಾರಣಕ್ಕೆ ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಗೌತಮ್ ಅವರ ಆದೇಶದಂತೆ ಸ್ಥಳೀಯ ಸಿಬ್ಬಂದಿ ಪೂಜೆಗೆ ಅಡ್ಡಿಪಡಿಸಿದ್ದರು.

ಹಳೇಬೀಡಿನ ನಾಡ ಕಚೇರಿ ಉಪತಹಶೀಲ್ದಾರ್ ಮೊಹನ್ ಕುಮಾರ್ ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಗೌತಮ್ ಅವರಿಗೆ ದೂರವಾಣಿ ಕರೆ ಮಾಡಿ, ‍‘ಬಸ್ತಿಹಳ್ಳಿಯಲ್ಲಿ ಒಂದೇ ಸ್ಥಳದಲ್ಲಿರುವ ವಿಜಯಿ ಪಾರ್ಶ್ವನಾಥ, ಶಾಂತಿನಾಥ ಹಾಗೂ ಆದಿನಾಥ ಎಂಬ ಬಸದಿಗಳು ಜಿನ್ನೆ ದೇವರು ಎಂಬ ಹೆಸರಿನಲ್ಲಿ ಮುಜರಾಯಿ ಇಲಾಖೆಯಿಂದ ಪೂಜೆ ನೆರವೇರಿಸಲಾಗುತ್ತಿದೆ. ಜಿನ್ನೆ ದೇವರು ಕಾಲಕ್ರಮೇಣ ದಾಖಲೆಯಲ್ಲಿ ಜಂಗಮ ದೇವರು ಎಂದು ತಪ್ಪಾಗಿದೆ. ದಾಖಲಾತಿ ಸರಿಪಡಿಸಲು ಜೈನ ಸಮಾಜದವರು ಅರ್ಜಿ ಸಲ್ಲಿಸಿದ್ದಾರೆ. ಪೂಜೆ ನಡೆಸಲು ಅವಕಾಶ ಕೊಡಿ’ ಎಂದು ಮನವಿ ಮಾಡಿದರು. ಗೌತಮ್ ಒಪ್ಪಿಗೆ ನೀಡಿದ್ದರಿಂದ ಬುಧವಾರ ಬೆಳಿಗ್ಗೆಯಿಂದ ಪೂಜೆ ಆರಂಭವಾಯಿತು.

ADVERTISEMENT

ಪೂಜಾ ಕಾರ್ಯ ಆರಂಭಿಸುವ ಸಂಬಂಧ ಹಾಸನದ ಸುಕುಮಾರ್, ವಿದ್ವಾಂಸ ವೀರೇಂದ್ರ ಬೇಗೂರು, ಅಡಗೂರಿನ ಧವನ್ ಜೈನ್ ಜೈನ ಸಮಾಜದ ಗಣ್ಯರೊಂದಿಗೆ ಮಾತುಕತೆ ನಡೆಸಿದ್ದರು.‌‌

‘ಶಾಶ್ವತ ಪೂಜೆಗೆ ಅವಕಾಶ ಕೊಡಿ’

‘ಬಸ್ತಿಹಳ್ಳಿಯ ಜೈನ ಬಸದಿಗಳಲ್ಲಿ ಪೂಜೆ ನಡೆಸಲು ಜಮೀನು ಮೀಸಲಿಟ್ಟಿದ್ದರು ಎಂಬುದಕ್ಕೆ ಆಧಾರಗಳಿವೆ. ಅನಾದಿ ಕಾಲದಿಂದಲೂ ಪೂಜೆ ನಡೆಯುತ್ತಿದೆ. ಪುರಾತತ್ವ ಇಲಾಖೆ ವಾರ್ಷಿಕ ಮಸ್ತಕಾಭಿಷೇಕ ನಡೆಸುವುದಕ್ಕೂ ಅವಕಾಶ ನೀಡಿದೆ. ಶಾಂತಿ ಪ್ರಿಯರಾದ ಜೈನರಿಗೆ ತೊಂದರೆ ಕೊಡದೆ ಬಸದಿಗಳಲ್ಲಿ ಶಾಶ್ವತ ಪೂಜೆಗೆ ಅವಕಾಶ ಕೊಡಬೇಕು’ ಎಂದು ಶಾಸಕ ಕೆ.ಎಸ್.ಲಿಂಗೇಶ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.