ADVERTISEMENT

ಬೇಲೂರು | ಸೌಲಭ್ಯ ವಂಚಿತ ಯಗಚಿ ಜಲಾಶಯ

ನಯನ ಮನೋಹರ ದೃಶ್ಯ ವೀಕ್ಷಣೆಗೆ ಬರುವ ಪ್ರವಾಸಿಗರ ಬೇಸರ

ಮಲ್ಲೇಶ
Published 20 ಜೂನ್ 2025, 6:15 IST
Last Updated 20 ಜೂನ್ 2025, 6:15 IST
ಬೇಲೂರಿನ ಯಗಚಿ ಜಲಾಶಯದಿಂದ ನೀರು ಹೊರಬಿಟ್ಟಿರುವುದು 
ಬೇಲೂರಿನ ಯಗಚಿ ಜಲಾಶಯದಿಂದ ನೀರು ಹೊರಬಿಟ್ಟಿರುವುದು    

ಬೇಲೂರು: ಚಿಕ್ಕಮಗಳೂರು ರಸ್ತೆಯಲ್ಲಿ ಪಟ್ಟಣದಿಂದ ಕೇವಲ 2 ಕಿ.ಮೀ. ದೂರದ ಚಿಕ್ಕಬ್ಯಾಡಿಗೆರೆ ಗ್ರಾಮದ ಬಳಿ ಇರುವ ಯಗಚಿ ಜಲಾಶಯ, ಈ ವರ್ಷ 2 ನೇ ಬಾರಿಗೆ ಭರ್ತಿಯಾಗಿದೆ. ಆದರೆ, ಮೂಲಸೌಕರ್ಯಗಳ ಕೊರತೆಯಿಂದ ಜಲಾಶಯ ವೀಕ್ಷಣೆಗೆ ಬರುವ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಯಗಚಿ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಬೇಲೂರು ತಾಲ್ಲೂಕಿನ ಮಲೆನಾಡು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಾಶಯಕ್ಕೆ 1ಸಾವಿರ ಕ್ಯುಸೆಕ್‌ ಒಳಹರಿವು ಇದೆ. 5 ಕ್ರಸ್ಟ್ ಗೇಟ್‌ಗಳ ಮೂಲಕ 1,200 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜಲಾಶಯದಿಂದ ಭೋರ್ಗರೆಯುತ್ತ ಹರಿಯುವ ನೀರಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮಳೆಯ ನಡುವೆಯೂ ಜನ ತೆರಳುತ್ತಿದ್ದಾರೆ. ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯದ ಮೇಲಿನಿಂದ, ನದಿಯಲ್ಲಿ ಹರಿಯುವ ನೀರಿನ ನೋಟ ರುದ್ರ ರಮಣೀಯವಾಗಿದೆ. ಚನ್ನಕೇಶವಸ್ವಾಮಿ ದೇವಾಲಯಕ್ಕೆ ಬರುವ ಪ್ರವಾಸಿಗರು ಮತ್ತು ಚಿಕ್ಕಮಗಳೂರಿಗೆ ತೆರಳುವ ಪ್ರಯಾಣಿಕರು ಹಾಗೂ ಸುತ್ತಲಿನ ಗ್ರಾಮಸ್ಥರು ಹೆಚ್ಚು ಉತ್ಸಾಹದಿಂದ ಯಗಚಿ ಜಲಾಶಯ ವೀಕ್ಷಿಸುತ್ತಿದ್ದಾರೆ.

ADVERTISEMENT

ಜಲಾಶಯದ ದ್ವಾರದಿಂದ ನೀರು ಹರಿಯುವ ಮನಮೋಹಕ ದೃಶ್ಯ ಆಸ್ವಾದಿಸಲು ತೆರಳುವಾಗ, ಇಳಿಜಾರಿನಂತಿರುವ ಕೆಸರಿನ ಕಿರಿದಾದ ರಸ್ತೆ ಜಾರುತ್ತದೆ. ಕೆಲವರು ಜಾರಿ ಬಿದ್ದಿರುವುದೂ ಇದೆ. ನೀರು ಹರಿಯುವ ಎರಡೂ ಬದಿಯಲ್ಲಿ ಕಂಬಿಗಳನ್ನು ಅಳವಡಿಸಿದ್ದರೂ, ಕೆಸರು ಮತ್ತು ಇಳಿಜಾರು ರಸ್ತೆ ಅಪಾಯಕ್ಕೆ ಅವಕಾಶ ನೀಡುತ್ತಿದೆ ಎಂದು ಜನರು ದೂರುತ್ತಿದ್ದಾರೆ.

ಇದು ಒಂದು ಸಮಸ್ಯೆಯಾದರೆ, ಜಲಾಶಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಜಲಾಶಯದ ಬಳಿ ಕಾಯಂ ಉಪಾಹಾರ ಮಂದಿರವಾಗಲಿ, ತಂಗುದಾಣವಾಗಲಿ ಇಲ್ಲ. ಕೆಲವೊಂದು ಮೂಲಸೌಲಭ್ಯಗಳ ಕಲ್ಪಿಸುವಲ್ಲಿ ಯಗಚಿ ಯೋಜನಾ ಅಧಿಕಾರಿಗಳ ನಿರಾಸಕ್ತಿ ಕಂಡುಬರುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.

ಯಗಚಿ ಜಲಾಶಯಕ್ಕೆ ತೆರಳುವ ಹಾದಿ ಕೆಸರುಮಯವಾಗಿದೆ 

3.6 ಟಿ.ಎಂ.ಸಿ ಅಡಿ ಸಾಮರ್ಥ್ಯ ಹೊಂದಿರುವ ಯಗಚಿ ಜಲಾಶಯ ಮುಂಗಾರಿಗೂ ಮೊದಲೇ ಕಳೆದ ತಿಂಗಳು ಭರ್ತಿಯಾಗಿದ್ದ ಜಲಾಶಯ ಈಗ ಮತ್ತೊಮ್ಮೆ ಭರ್ತಿ: ಹೆಚ್ಚುವರಿ ನೀರು ನದಿಗೆ

ಕಬ್ಬಿಣದ ಕಂಬಿಗಳನ್ನು ಅಳವಡಿಸಿರುವ ಸ್ಥಳದ ಪಕ್ಕದಲ್ಲಿ 10 ಅಡಿ ಅಗಲ ಇಂಟರ್‌ಲಾಕ್ ಅಳವಡಿಸಬೇಕು. ಇಳಿಜಾರು ಇರುವ ಸ್ಥಳದಲ್ಲಿ ಕಾಂಕ್ರೀಟ್ ಮೆಟ್ಟಿಲು ನಿರ್ಮಿಸಬೇಕು
ಎಸ್.ಎಂ. ರಾಜು ಜಯ ಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ
ಶೌಚಾಲಯ ನಿರ್ಮಿಸಲು ಶಾಸಕರ ಅನುದಾನದಲ್ಲಿ‌ ₹5 ಲಕ್ಷ ನೀಡಲಾಗಿದೆ. ಜಲಾಶಯವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ
ಎಚ್.ಕೆ.ಸುರೇಶ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.