ADVERTISEMENT

ಯಗಚಿ ಜಲಾಶಯಕ್ಕೆ ಸಂಪ್ರದಾಯ ಉಲ್ಲಂಘಿಸಿ ಬಾಗಿನ; ಕ್ರಮಕ್ಕೆ ಒತ್ತಾಯ

ಯಗಚಿಗೆ ಬಾಗಿನ ಅರ್ಪಿಸಿದ್ದ ಸಿ.ಟಿ.ರವಿ ಪತ್ನಿ ಪಲ್ಲವಿ, ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 14:09 IST
Last Updated 3 ಸೆಪ್ಟೆಂಬರ್ 2018, 14:09 IST
ಬೇಲೂರಿನ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಪತ್ನಿ ಮತ್ತು ನಗರಸಭೆ ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಯಗಚಿ ಯೋಜನಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ಬೇಲೂರಿನ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಪತ್ನಿ ಮತ್ತು ನಗರಸಭೆ ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಯಗಚಿ ಯೋಜನಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು   

ಬೇಲೂರು: ಇಲ್ಲಿನ ಯಗಚಿ ಜಲಾಶಯಕ್ಕೆ ಸಂಪ್ರದಾಯ ಉಲ್ಲಂಘಿಸಿ ಬಾಗಿನ ಅರ್ಪಿಸಿದ್ದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಪತ್ನಿ ಪಲ್ಲವಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಯಗಚಿ ಜಲಾಶಯ ಯೋಜನೆಯ ಎಂಜಿನಿಯರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಯಗಚಿ ಜಲಾಶಯಕ್ಕೆ ಅನುಮತಿ ಪಡೆಯದೆ ಬಾಗಿನ ಅರ್ಪಿಸಿದವರ ವಿರುದ್ಧ ಕ್ರಮಕೈಗೊಳ್ಳದ ಯಗಚಿ ಜಲಾಶಯದ ಎಂಜಿನಿಯರ್‌ಗಳ ವಿರುದ್ಧ ಧಿಕ್ಕಾರ ಕೂಗಿದರು. ‘15 ದಿನಗಳ ಹಿಂದೆ ಭರ್ತಿಯಾದ ಯಗಚಿ ಜಲಾಶಯಕ್ಕೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಪತ್ನಿ ಪಲ್ಲವಿ, ನಗರಸಭೆ ಅಧ್ಯಕ್ಷರು, ಆಯುಕ್ತರು ಸೇರಿದಂತೆ 13 ಮಂದಿ ಜಲಾಶಯ ವೀಕ್ಷಿಸುವ ನೆಪದಲ್ಲಿ ಬಾಗಿನ ಅರ್ಪಿಸಿದ್ದಾರೆ. ಇದು ಕಾನೂನಿನ ಉಲ್ಲಂಘನೆ’ ಎಂದು ಆರೋಪಿಸಿದರು.

ಯಗಚಿ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ನಾಲ್ಕು ವರ್ಷಗಳ ಹಿಂದೆ ಬೇಲೂರಿನ ಸಂಘಟನೆಗಳ ಪ್ರಮುಖರು ಬಾಗಿನ ಅರ್ಪಿಸಿದಾಗ ಅವರ ವಿರುದ್ಧ ದೂರು ದಾಖಲಿಸಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದರು. ಈಗ ಕ್ರಮ ಕೈಗೊಳ್ಳದೇ ಮೌನ ವಹಿಸಿದ್ದಾರೆ ಎಂದು ಸಂಘಟನೆಗಳ ಪ್ರಮುಖರು ಆರೋಪಿಸಿದರು.

ADVERTISEMENT

ಸ್ಥಳಕ್ಕೆ ಬಂದ ಯಗಚಿ ಜಲಾಶಯ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಪ್ಪ, ‘ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್‌, ಡಾ.ರಾಜಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷ ಬಿ.ಆರ್.ತೀರ್ಥಂಕರ್‌, ಕರ್ನಾಟಕ ರಕ್ಷಣಾ ವೇದಿಕೆಯ ಚಂದ್ರಶೇಖರ್‌, ಟಿಪ್ಪು ಸೇನೆಯ ನೂರ್‌ ಅಹಮ್ಮದ್‌, ಜಯ ಕರ್ನಾಟಕ ಸಂಘಟನೆಯ ಅರುಣ್‌ ಕುಮಾರ್‌, ಮಾಳೇಗೆರೆ ತಾರಾನಾಥ್‌, ಬಸವರಾಜು, ಮಂಜುನಾಥ್‌, ಅನೀಫ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.