ADVERTISEMENT

ಯುವಜನತೆ ದುಶ್ಚಟಗಳಿಂದ ದೂರವಿರಿ: ಜಿಲ್ಲಾಧಿಕಾರಿ ಲತಾ ಕುಮಾರಿ

ವ್ಯಸನ ಮುಕ್ತ ದಿನಾಚರಣೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:46 IST
Last Updated 2 ಆಗಸ್ಟ್ 2025, 5:46 IST
ಹಾಸನದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು
ಹಾಸನದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು   

ಹಾಸನ: ಯುವಜನತೆ ದುಶ್ಚಟಗಳಿಂದ ದೂರವಿದ್ದು, ಜೀವನ ಕೌಶಲ ವೃದ್ಧಿಗೊಳಿಸಿಕೊಳ್ಳಲು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಂಧದಕೋಠಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ಗಂಧದಕೋಠಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಪೀಳಿಗೆಗೆ ಸಹಜವಾಗಿ ಕುತೂಹಲ ಇರುತ್ತದೆ. ಆದರೆ ಸ್ನೇಹಿತರೊಂದಿಗೆ ಬೆರೆತು ಯಾವುದೇ ಪ್ರಯೋಗಗಳನ್ನು ಮಾಡಲು ಪ್ರಯತ್ನಿಸಬೇಡಿ. ಕುತೂಹಲಕ್ಕೆ ಒಮ್ಮೆ ನೋಡುತ್ತೇನೆ. ನಂತರ ಮನಸ್ಸು ನಿಗ್ರಹಿಸುತ್ತೇನೆ ಎಂದುಕೊಂಡರೆ ಅದು ತಪ್ಪು. ಚಟಗಳು ನರಕಕ್ಕೆ ಬಾಗಿಲು ಇದ್ದಂತೆ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.

ADVERTISEMENT

ಉದಾತ್ತ ಗುರಿ ಇಟ್ಟುಕೊಂಡು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸರಿಯಾದ ಮಾರ್ಗ ಆಯ್ಕೆ ಮಾಡಿಕೊಂಡು, ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು. ಕೆಟ್ಟ ವ್ಯಸನಗಳಿಗೆ ಬಲಿಯಾಗದೇ ಕನಸುಗಳನ್ನು ನನಸು ಮಾಡಿಕೊಳ್ಳುವ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ತಿಳಿಸಿದರು.

ಮಹಾಂತ ಶಿವಯೋಗಿಗಳು ಜನರಿಂದ ಯಾವುದೇ ದವಸ, ಧಾನ್ಯ, ನಗದು ಕೇಳಲಿಲ್ಲ. ಜನರಲ್ಲಿರುವ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಎಂದು ಮನೆ ಮನೆ ಬಾಗಿಲಿಗೆ ಹೋಗಿ ಜನರ ಮನವೊಲಿಸಿದರು. ಕೆಟ್ಟ ಚಟಗಳಿಂದ ದೂರವಿರುವಂತೆ ಮನಃಪರಿವರ್ತನೆ ಮಾಡುತ್ತಾ ಸಾಗಿದ ಮಹಾತ್ಮಾರು. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಇವರ ದಾರಿಯಲ್ಲಿ ಎಲ್ಲರೂ ನಡೆಯೋಣ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಚಂದ್ರಮೌಳಿ, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ತಿಮ್ಮೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನಡೆಸಿದ ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ದುಶ್ಚಟ ಬಿಡಲು ಮನಸ್ಸು ಮಾಡಿ

ಪ್ರಸ್ತುತ ದಿನಗಳಲ್ಲಿ ಹೆಣ್ಣು- ಗಂಡು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಒಳಗಾಗಿ ದೈಹಿಕ ಮಾನಸಿಕ ಆರ್ಥಿಕ ಸಾಮಾಜಿಕವಾಗಿ ತೊಂದರೆಗೆ ಸಿಲುಕಿ ನಲುಗುತ್ತಿರುವ ಯುವ ಜನತೆ ಎಚ್ಚೆತ್ತುಕೊಂಡು ವ್ಯಸನಗಳನ್ನು ಬಿಡಲು ಮೊದಲು ಮನಸ್ಸು ಮಾಡಬೇಕು ಎಂದು ಹಿಮ್ಸ್‌ ಮನೋ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥ ಡಾ.ಸಂತೋಷ್‌ ಎನ್.ವಿ. ಹೇಳಿದರು. ತಂಬಾಕು ಸೇವನೆ ಮಾಡುತ್ತಿರುವವರು ಜಗತ್ತಿನಲ್ಲಿ ಹೆಚ್ಚು ಮಾನಸಿಕ ತೊಂದರೆಗೆ ಸಿಲುಕಿದ್ದಾರೆ. ಅತಿಯಾದ ಬೇಜಾರು ಖುಷಿ ಅನುಮಾನ ಸಿಟ್ಟು ಗಾಬರಿ ಇವುಗಳೂ ವ್ಯಸನಗಳೇ. ಇದಕ್ಕೆಲ್ಲಾ ಚಿಕಿತ್ಸೆ ಇದೆ ಎಂದರು. ಬಿಪಿಎಲ್ ಕಾರ್ಡ್ ಇರುವವರಿಗೆ ಹಿಮ್ಸ್‌ನಲ್ಲಿ ಉಚಿತ ಚಿಕಿತ್ಸೆ ಇದ್ದು ಎಪಿಎಲ್ ಕಾರ್ಡ್ ಇರುವವರು ಶೇ 30 ರಷ್ಟು ಹಣ ಪಾವತಿ ಮಾಡಬೇಕು. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.