
ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಹೊಯ್ಸಳ ವೇದಿಕೆ ಆವರಣದಲ್ಲಿ ಹೋಬಳಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭಾರತಾಂಬೆ ಭಾವಚಿತ್ರಕ್ಕೆ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು
ನುಗ್ಗೇಹಳ್ಳಿ: ದೇಶ ಕಟ್ಟುವ ಕೆಲಸವನ್ನು ಯುವಕರು ಮಾಡಬೇಕು. ಹಿಂದೂ ಸಮಾಜದ ಏಕತೆಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಪುರ ವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹೋಬಳಿ ಕೇಂದ್ರದ ಹೊಯ್ಸಳ ವೇದಿಕೆ ಆವರಣದಲ್ಲಿ ಹೋಬಳಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೋಬಳಿ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಹಿಂದೂ ಸಮಾಜೋತ್ಸವ ನಡೆಯುತ್ತಿದ್ದು, ದೇಶದಲ್ಲಿ ಬಲಿಷ್ಠ ಹಿಂದೂ ಸಮಾಜವನ್ನು ಬಲಪಡಿಸುವ ದೃಷ್ಟಿಯಿಂದ ಕಳೆದ 100 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಾ ಸಂಘ ಕಾರ್ಯನಿರ್ವಹಿಸುತ್ತಿದೆ. ವಿಶ್ವದಲ್ಲಿಯೇ ಭಾರತವನ್ನು ಬಲಿಷ್ಠ ಹಿಂದೂ ದೇಶವನ್ನಾಗಿ ಮಾಡಲು ಯುವಕರು ಕೈಜೋಡಿಸಬೇಕು ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಯೋಜಕ ಪ್ರಬಂಜನ್ ಸೂರ್ಯ ಮಾತನಾಡಿ, ದೇಶದಲ್ಲಿ ಹಿಂದೂ ಸಮಾಜದ ಉಳಿವಿಗೆ ಆರ್‌ಎಸ್‌ಎಸ್ ಪಾತ್ರ ಬಹು ಮುಖ್ಯವಾಗಿದೆ. 100 ವರ್ಷಗಳನ್ನು ಪೂರೈಸಿರುವ ಈ ಸಂಘಟನೆ ದೇಶ ಕಟ್ಟುವ ಕೆಲಸವನ್ನು ಮಾಡಿದೆ. ಕೆಲವು ರಾಜಕೀಯ ಪಕ್ಷಗಳು ತನ್ನ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಆರ್‌ಎಸ್‌ಎಸ್ ಕುರಿತು ಕೆಲವು ಆರೋಪಗಳನ್ನು ಮಾಡುತ್ತಾರೆ. ದೇಶದ ಸಂಸ್ಕೃತಿ, ಧರ್ಮ ಉಳಿಸುವ ಕೆಲಸವನ್ನು ಜೊತೆಗೆ ದೇಶ ಕಟ್ಟುವ ಕೆಲಸವನ್ನು ಸ್ವಯಂ ಸೇವಾ ಸಂಘ ಮಾಡುತ್ತಿದೆ. ಹೋಬಳಿ ಕೇಂದ್ರದಲ್ಲಿ ಮುಂಬರುವ ದಿನಗಳಲ್ಲಿ ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆ ಹಿಂದೂ ಸಮಾಜದ ಅಭಿಮಾನಿಗಳಲ್ಲಿ ಮನವಿ ಮಾಡಿದರು.
ವಿಶ್ವ ಹಿಂದೂ ಪರಿಷತ್ ಸಂಘಟನೆಯ ಪ್ರಮುಖರಾದ ಸುವರ್ಣ ಮಾತನಾಡಿ, ಅನಾದಿ ಕಾಲದಿಂದಲೂ ಹಿಂದೂ ರಾಷ್ಟ್ರದಲ್ಲಿ ಮಹಿಳೆಯರನ್ನು ಮಾತೆಯ ರೂಪದಲ್ಲಿ ನೋಡುತ್ತಾ ಬರುತ್ತಿದ್ದಾರೆ. ಜಗನ್ಮಾತೆ ಪರಮೇಶ್ವರಿ, ಸರಸ್ವತಿ ದೇವಿ, ಲಕ್ಷ್ಮಿ ಮಾತೆಯನ್ನು ಸಾವಿರಾರು ವರ್ಷಗಳಿಂದಲೂ ಪೂಜಿಸುತ್ತಾ ಬರಲಾಗುತ್ತಿದೆ. ಭಾರತ ದೇಶದಲ್ಲಿ ಹೆಣ್ಣನ್ನು ಪೂಜ್ಯ ಭಾವನೆಯಲ್ಲಿ ನೋಡುತ್ತಿರುವುದನ್ನು ಇಡೀ ವಿಶ್ವವೇ ಗೌರವಿಸುತ್ತಿದೆ ಎಂದರು.
ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಶಿವಶಂಕರ್, ಬಿಜೆಪಿ ಅಧ್ಯಕ್ಷ ಗಂಗಾಧರ್ ಪರಮ, ಪ್ರಮುಖರಾದ ಛಾಯಾ ಕೃಷ್ಣಮೂರ್ತಿ, ತೂಬಿನಕೆರೆ ಗಿರೀಶ್, ಮುಳ್ಳುಕೆರೆ ಪ್ರಶಾಂತ್,ಶೋಭಾ, ಹೇಮಲತಾ, ಕುಸುಮ, ಸತೀಶ್, ಬಸವರಾಜ್ ಎಂ. (ಮುಳ್ಳುಕೆರೆ), ಎನ್.ಸಿ. ವಿಶ್ವನಾಥ್, ಜಗನ್ನಾಥ್, ಕಲಾನಾಥ್, ರವಿಶಾಚಾರ್, ಆಕಾಶ್, ಸೇರಿದಂತೆ ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.