ADVERTISEMENT

ಹಾಸನ ಜಿಲ್ಲೆಗೆ ಕೇರಳ ಅಲೆಯ ಕಂಟಕ!

ನರ್ಸಿಂಗ್ ಕಾಲೇಜಿನ 217 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು; ಹೆಚ್ಚಿದ ಆತಂಕ

ಕೆ.ಎಸ್.ಸುನಿಲ್
Published 14 ಆಗಸ್ಟ್ 2021, 9:38 IST
Last Updated 14 ಆಗಸ್ಟ್ 2021, 9:38 IST
ಹಿಮ್ಸ್‌ನಲ್ಲಿ ಯುವಕನ ಆರೋಗ್ಯ ತಪಾಸಣೆ ಮಾಡಿದ ಸಿಬ್ಬಂದಿ
ಹಿಮ್ಸ್‌ನಲ್ಲಿ ಯುವಕನ ಆರೋಗ್ಯ ತಪಾಸಣೆ ಮಾಡಿದ ಸಿಬ್ಬಂದಿ   

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೇರಳದಿಂದ ಜಿಲ್ಲೆಗೆ ಬಂದಿರುವ 217 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇದುವರೆಗೆ ನಗರದ 14 ನರ್ಸಿಂಗ್ ಕಾಲೇಜಿನ 3,089 ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಬುಧ
ವಾರ 47 ಹಾಗೂ ಗುರುವಾರ 30 ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟಿದ್ದು, ಸೋಂಕಿತರು ಹಾಗೂ ಪ್ರಾಥಮಿಕ ಸಂಪರ್ಕಿತರನ್ನು ಸಾಂಸ್ಥಿಕ ಐಸೋಲೇಷನ್‌ಗೆ ಒಳಪಡಿಸಲಾಗಿದೆ.

ಕೇರಳದಿಂದ ಮರಳಿದವರೇ ಜಿಲ್ಲೆಗೆ ಕಂಟಕವಾಗಿ ಪರಿಣಮಿಸುತ್ತಿದ್ದು, ಪತ್ತೆಯಾಗುತ್ತಿರುವ ಕೊರೊನಾಪಾಸಿಟಿವ್‌ ಪ್ರಕರಣಗಳಲ್ಲಿ ಅವರದ್ದೇ ಸಿಂಹಪಾಲು. ಸೋಂಕು ಪತ್ತೆಯಾದ ಬಹುತೇಕ ವಿದ್ಯಾರ್ಥಿಗಳು ಸೋಂಕು ಲಕ್ಷಣ ರಹಿತರಾಗಿದ್ದಾರೆ.

ADVERTISEMENT

ಹೊರ ರಾಜ್ಯಗಳಿಂದ ಪರೀಕ್ಷೆ ಬರೆಯಲು ಬಂದಿರುವ ನರ್ಸಿಂಗ್ ವಿದ್ಯಾರ್ಥಿಗಳ ಆರ್‌ಟಿ–ಪಿಸಿಆರ್‌ ಕಡ್ಡಾಯ ಪರೀಕ್ಷೆ ಅಭಿಯಾನ ಮುಂದುವರಿಸಿರುವ ಆರೋಗ್ಯ ಇಲಾಖೆಗೆ ನಿತ್ಯ ಪತ್ತೆಯಾಗುತ್ತಿರುವಪಾಸಿಟಿವ್‌ ಪ್ರಕರಣ ತಲೆ ನೋವು ಉಂಟು ಮಾಡಿದೆ. ಗುರುವಾರವೂ 195 ವಿದ್ಯಾರ್ಥಿಗಳಿಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಲಾಗಿದೆ.

ಸೋಂಕಿತರನ್ನು ಸಾಂಸ್ಥಿಕ ಐಸೋಲೇಷನ್‌ ಗೆ ಒಳಪಡಿಸಿ, ಅವರ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡಲಾಗುತ್ತಿದೆ. ಅವರು ವಾಸವಿರುವ ಕಟ್ಟಡಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕ್ವಾರಂಟೈನ್‌ನಲ್ಲಿರುವ ಪ್ರಾಥಮಿಕ ಸಂಪರ್ಕಿತರು ಹಾಗೂ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾದವರ ವರದಿ ಪ್ರಕಟವಾದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.ಹೊರ ರಾಜ್ಯದವರಿಂದ ಸೋಂಕಿನ ಹರಡುವಿಕೆ ತೀವ್ರಗೊಳ್ಳುವ ಆತಂಕವಿದ್ದರೆ ಮತ್ತೊಂದೆಡೆಸ್ಥಳೀಯವಾಗಿ ಸೋಂಕಿನ ಪ್ರಸರಣ ಹೆಚ್ಚುತ್ತಿರುವುದು ಮೂರನೇ ಅಲೆ ಭೀತಿ ಶುರುವಾಗಿದೆ.

‘ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವುದಕ್ಕೂ ಮೂರನೇ ಅಲೆಗೂ ಸಂಬಂಧ ಇಲ್ಲ. ಕೇರಳದಿಂದ ಬಂದಿರುವ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಈಗಾ ಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕಾಲೇಜು, ಆಸ್ಪತ್ರೆ ಹಾಗೂ ಸೋಂಕು ಹೆಚ್ಚು ಕಂಡು ಬರುವ ಕಡೆ ತಪಾಸಣೆ ಹೆಚ್ಚಿಸಲಾಗುತ್ತಿದೆ. ನಿತ್ಯ ಐದು ಸಾವಿರಕ್ಕೂ ಹೆಚ್ಚು ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.