ADVERTISEMENT

ಅಪಘಾತ: ಮಾಜಿ ಮೇಯರ್ ಫಿರ್ದೋಸ್ ಸೇರಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 9:55 IST
Last Updated 15 ಮಾರ್ಚ್ 2012, 9:55 IST

ಹಾವೇರಿ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹುಬ್ಬಳ್ಳಿ -ಧಾರವಾಡ ಮಹಾನಗರಪಾಲಿಕೆ ಮಾಜಿ ಮೇಯರ್ ಮತ್ತು ಕಾರಿನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಕರೂರ್ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ.

ಮಾಜಿ ಮೇಯರ್ ಹುಬ್ಬಳ್ಳಿಯ ಫಿರ್ದೋಸ್ ಕೊಣ್ಣೂರ (48) ಹಾಗೂ ಕಾರಿನ ಚಾಲಕ ಬಸವರಾಜ (35) ಮೃತಪಟ್ಟಿದ್ದಾರೆ. ಫಿರ್ದೋಸ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ತಾಯಿ ಇದ್ದಾರೆ.

ಫಿರ್ದೋಸ್ ಅವರು ಚುನಾವಣಾ ಪ್ರಚಾರ ಮುಗಿಸಿಕೊಂಡು ಚಿಕ್ಕಮಗ ಳೂರಿನಿಂದ ಹುಬ್ಬಳ್ಳಿಗೆ ವಾಪಸು ಬರುತ್ತಿದ್ದಾಗ ಕುಮಾರಪಟ್ಟಣಂ ಸಮೀಪದ ಕರೂರ್ ಕ್ರಾಸ್ ಬಳಿ ವೇಗವಾಗಿ ಹಿಂದಿನಿಂದ ಬಂದ ಲಾರಿಯೊಂದು ಕಾರನ್ನು ಹಿಂದೆ ಹಾಕಲು ಮುನ್ನುಗ್ಗಿದ್ದಾಗ ಕಾರಿಗೆ ಡಿಕ್ಕಿ ಹೊಡೆಯಿತು ಎಂದು ಹೇಳಲಾಗಿದೆ.

ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಫಿರ್ದೋಸ್ ಹಾಗೂ ಚಾಲಕ ಬಸವರಾಜ ಅವರು ಕಾರಿನ ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಸೂರಿ ಹಾಗೂ ಪಿಎಸ್‌ಐ ಭೀಮಣ್ಣನವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾ ರಲ್ಲದೇ, ಕಾರಿನ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದ ಮೃತ ದೇಹಗಳನ್ನು ಸಾರ್ವಜನಿಕರ ಹಾಗೂ ಪೊಲೀಸ್ ಸಿಬ್ಬಂದಿ ಸಹಕಾರದಿಂದ ಹೊರಕ್ಕೆ ತೆಗೆದಿದ್ದಾರೆ. ಕುಮಾರಪಟ್ಟಣಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.