ADVERTISEMENT

ಅಸಮರ್ಪಕ ಬಿಸಿಯೂಟ: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2012, 8:20 IST
Last Updated 27 ಜುಲೈ 2012, 8:20 IST
ಅಸಮರ್ಪಕ ಬಿಸಿಯೂಟ: ಗ್ರಾಮಸ್ಥರ ಪ್ರತಿಭಟನೆ
ಅಸಮರ್ಪಕ ಬಿಸಿಯೂಟ: ಗ್ರಾಮಸ್ಥರ ಪ್ರತಿಭಟನೆ   

ಹಾವೇರಿ: ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಸಮರ್ಪಕ ಬಿಸಿಯೂಟ ನೀಡುತ್ತಿಲ್ಲ ಎಂದು ಆರೋಪಿಸಿ ಗಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಯಲಗಚ್ಚ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸರಿಯಾದ ಬಿಸಿಯೂಟ ನೀಡದಿರುವ ಬಗ್ಗೆ ವಿದ್ಯಾರ್ಥಿಗಳಿಂದ ಹಲವು ಬಾರಿ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬುಧವಾರ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದರು. ಆಗ ಬಿಸಿ ಯೂಟ ತಯಾರಿಕೆಗೆ ಕೊಳೆತ ತರಕಾರಿ ಹಾಗೂ ಆಹಾರ ಧಾನ್ಯಗಳಲ್ಲಿ ಕಲುಷಿತ ಪದಾರ್ಥಗಳು ಮಿಶ್ರಣವಾಗಿರುವುದು ಬೆಳಕಿಗೆ ಬಂದಿದೆ. ಅದೇ ಪದಾರ್ಥ ಗಳನ್ನು ಪಂಚಾಯಿತಿಗೆ ತಂದು ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರ ಕಮತರ, ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ  ಕಲಬೆರಕೆ ಆಹಾರದಲ್ಲಿಯೇ ತಯಾರಿಸಿದ ಬಿಸಿ ಯೂಟ ನೀಡುತ್ತಿದ್ದಾರೆ. ಸರ್ಕಾರ ನೀಡಿದ ಅನುದಾನವನ್ನು ಸಮರ್ಪಕ ವಾಗಿ ಬಳಸದೆ ವಿದ್ಯಾರ್ಥಿಗಳಿಗೆ ಕೊಳೆತ ತರಕಾರಿ ಬಳಸುತ್ತಿದ್ದಾರೆ ಎಂದು ಆಪಾದಿಸಿದರು. 

ಶಿಕ್ಷಕರು ಸಹ ಗುಣಮಟ್ಟದ ಅಡುಗೆ ಮಾಡುವ ಬಗ್ಗೆ ಗಮನ ಹರಿಸುತ್ತಿಲ್ಲ. ಯೋಜನೆಯ ಉದ್ದೇಶ ಈಡೇರುವ ಬದಲು ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಾನಿಯಾಗುವ ಸನ್ನಿವೇಶ ಉಂಟಾಗಿದೆ. ತಕ್ಷಣವೇ ಈ ಬಗ್ಗೆ ಶಾಲಾ ಮುಖ್ಯಸ್ಥರು ಸೂಕ್ತ ಸೂಚನೆ ನೀಡಬೇಕೆಂದು ಕಮತರ ಒತ್ತಾಯಿಸಿದರು.ನಂತರ ಪ್ರತಿಭಟನಾ ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್ ಕೆ.ಶಿವಲಿಂಗು ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಅಕ್ರಮ ಮದ್ಯ ವಶ: ಗ್ರಾಮದ ಗೂಡಂಗಡಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಅಂತಹ ಅಂಗಡಿಗಳನ್ನು ಜಪ್ತು ಮಾಡು ವಂತೆ ಒತ್ತಾಯಿಸಿದರು. ಗ್ರಾಮಸ್ಥರ ಆಗ್ರಹದ ಮೇರೆಗೆ ತಹಸೀಲ್ದಾರ್ ಅವರು ಮೂರು ಅಂಗಡಿಗಳನ್ನು ಪರಿ ಶೀಲನೆ ನಡೆಸಿದಾಗ ಒಂಬತ್ತು ಪೆಟ್ಟಿಗೆ ಅಕ್ರಮ ಮದ್ಯ ಪತ್ತೆಯಾಗಿದ್ದು, ತಹ ಶೀಲ್ದಾರ್‌ರು ತಮ್ಮ ವಶಕ್ಕೆ ಪಡೆದು ಕೊಂಡು ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಕೇಶವ ತಿಮ್ಮೇನ ಹಳ್ಳಿ, ದೇವೇಂದ್ರಪ್ಪ ತೊಟಗೇರ, ರುದ್ರಪ್ಪ ಮೆಣಸಿನಕಾಯಿ, ಮಂಜು ನಾಥ ಪಾಟೀಲ, ವಿರೂಪಾಕ್ಷ ಮೂಕಿ, ಮಹೇಶ ಮೂಕಿ, ಮುತ್ತು ಬಳ್ಳಾರಿ, ದಾದು ಮುಲ್ಲಾ, ದೀಪಕ್ ಸಾಕ್ರೆ, ಚನ್ನಬಸಪ್ಪ ಗಾಜಿ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.