ADVERTISEMENT

`ಉತ್ತಮ ಆರೋಗ್ಯಕ್ಕೆ ಶುದ್ಧ ನೀರು ಅಗತ್ಯ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:44 IST
Last Updated 5 ಸೆಪ್ಟೆಂಬರ್ 2013, 6:44 IST

ಹಾವೇರಿ:  `ಭೂಮಿಯ ಮೇಲಿನ ಎಲ್ಲ ಜೀವಿಗೆ ನೀರೆ ಜೀವ. ಆದರೆ, ಬಹುತೇಕ ರೋಗಗಳು ನೀರಿನಿಂದಲೇ ಹರಡುತ್ತವೆ. ಆದ್ದರಿಂದ ಮಾನವ ಜೀವಿ ಉತ್ತಮ ಆರೋಗ್ಯಕ್ಕೆ ಶುದ್ಧ ನೀರನ್ನು ಕುಡಿಯಬೇಕು' ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಹಾವೇರಿ ಶಾಖೆಯ ವ್ಯವಸ್ಥಾಪಕ ಕೆ. ಉಮಾಪತಿ ಹೇಳಿದರು.

ಇತ್ತೀಚೆಗೆ ತಾಲ್ಲೂಕಿನ ದೇವಿಹೊಸೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬ್ಯಾಂಕ್ ವತಿಯಿಂದ ನೀರು ಶುದ್ಧೀಕರಿಸುವ ಯಂತ್ರ ದೇಣಿಗೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ನೀರಿನ ಮೂಲಗಳು ಕಲುಷಿತಗೊಂಡು ಮಾನವ ಜೀವಿಯ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿವೆ. ಈ ಕಾರಣಕ್ಕಾಗಿಯೇ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಹಾಗೂ ಶುದ್ಧ ನೀರನ್ನು ಕುಡಿಯಲೆಂದು ಶಾಲೆಗೆ ಬ್ಯಾಂಕ್ ವತಿಯಿಂದ ನೀರು ಶುದ್ಧೀಕರಿಸುವ ಯಂತ್ರವನ್ನು ನೀಡುತ್ತಿರುವುದಾಗಿ ತಿಳಿಸಿದರು.

ಎಸ್‌ಡಿಎಂಸಿ ಸದಸ್ಯ ಎನ್.ಡಿ.ಕಹಾರ ಮಾತನಾಡಿ, ಭಾರತೀಯ ಸ್ಟೇಟ್ ಬ್ಯಾಂಕ್ ಹಾವೇರಿ ಶಾಖೆ ನೀಡಿರುವ ನೀರು ಶುದ್ಧೀಕರಿಸುವ ಯಂತ್ರವನ್ನು ವಿದ್ಯಾರ್ಥಿಗಳು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕ ಕೆ.ಉಮಾಪತಿ ಅವರನ್ನು ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಮಸ್ಥರು ಅಭಿನಂದಿಸಿದರು.

ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಸ್. ಬಿ.ತೋಟದ, ಸದಸ್ಯರು, ಗ್ರಾ.ಪಂ. ಸದಸ್ಯ ಶಿವಾನಂದ ಪೂಜಾರ, ಸಿದ್ದಪ್ಪ ಮುಳಗುಂದ, ಮುಖ್ಯಾಧ್ಯಾಪಕಿ ಡಿ.ಚನ್ನಮ್ಮ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಿ.ಬಿ.ಹಿರೇಕೆರೂರು ಸ್ವಾಗತಿಸಿದರು. ಐ.ಜಿ.ಮರಚರಡ್ಡಿ ನಿರೂಪಿಸಿದರು. ಝಡ್.ಎ. ಮಣನದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.