ADVERTISEMENT

ಎಪಿಎಂಸಿ ಅಧ್ಯಕ್ಷರಾಗಿ ಬಾಬು ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 6:20 IST
Last Updated 5 ಜುಲೈ 2012, 6:20 IST

ರಾಣೆಬೆನ್ನೂರು; ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ  ತುಮ್ಮಿನಕಟ್ಟಿ ಕ್ಷೇತ್ರದ ಶೇಖರಪ್ಪ ಬಣಕಾರ ಅವರ ಅವಿಶ್ವಾಸ ಮಂಡನೆಯಿಂದ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಶಾಂತಿಯುತವಾಗಿ ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಕುಪ್ಪೇಲೂರು ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಾಬು ಹರಿಹರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

  ಕಾಂಗ್ರೆಸ್‌ನ 9 ಅಭ್ಯರ್ಥಿಗಳು ಮತ್ತು ಬಿಜೆಪಿ ಬೆಂಬಲಿತ 8 ಅಭ್ಯರ್ಥಿಗಳು ಬಾಬು ಹರಿಹರ ಅವರ ಪರವಾಗಿ ಕೈ ಎತ್ತುವ ಮೂಲಕ ಅವಿರೋಧ ಆಯ್ಕೆ ಮಾಡಿದ ಚುನಾವಣೆಯು ರಾಜ್ಯದಲ್ಲಿಯೇ ಹೊಸ ಮಾದರಿಯಾಗಿದೆ. ಮಾಜಿ ಅಧ್ಯಕ್ಷ ಶೇಖರಪ್ಪ ಬಣಕಾರ ಅವರ ಪರವಾಗಿ ಅವಿಶ್ವಾಸ ಮಂಡನೆ ಸಮಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಒಟ್ಟು 16 ಸದಸ್ಯರು ಸೇರಿ ಅವಿಶ್ವಾಸ ಮಂಡನೆಗೆ ಸಹಿ ಹಾಕಿ ಅವಿಶ್ವಾಸಕ್ಕೆ ಕೈ ಎತ್ತಿ ಶೇಖರಪ್ಪ ಬಣಕಾರ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಮುಂಬರುವ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಪ್ರಕಾರ ಬುಧವಾರ ನಡೆದ ಚುನಾವಣೆಯಲ್ಲಿ ಸರ್ವ ಸದಸ್ಯರು ಪಕ್ಷ ಭೇದ ಮರೆತು ಚುನಾವಣೆಗೆ ಬೆಂಬಲ ಮತ್ತು ಸಹಕಾರ ನೀಡಿದ್ದಾರೆ ಎಂದು ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಏಕನಾಥ ಭಾನುವಳ್ಳಿ ಸುದ್ದಿಗಾರರಿಗೆ ತಿಳಿಸಿದರು. 

ನೂತನ ಅಧ್ಯಕ್ಷ ಬಾಬು ಹರಿಹರ ಅವರು ಮಾತನಾಡಿ, ಪಕ್ಷ ಭೇದ ಮರೆತು ಸರ್ವ ಸದಸ್ಯರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಮೊದಲು ಅಭಿನಂದನೆ ತಿಳಿಸಿದರು. ಇದೊಂದು ಮಾದರಿ ಚುನಾವಣೆಯಾಗಿದೆ, ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲ್ಲೂಕಿನ ಕೃಷಿ ಮಾರುಕಟ್ಟೆ ಅಭಿವೃದ್ಧಿ ಸಮಿತಿಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಸದಸ್ಯರಾದ ನಂದೆಪ್ಪ ತೆಗ್ಗಿನ ಅವರು ಪಕ್ಷ ಭೇದ ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಸ್ಪರ ಸಹಕಾರ ಮನೋ ಭಾವದಿಂದ ಮುನ್ನಡೆಸಿಕೊಂಡು ಹೋಗುತ್ತೇವೆ. ಅವಿಶ್ವಾಸ ಮಂಡನೆ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ಶೇಖರಪ್ಪ ಬಣಕಾರ ಅವರು ಸದಸ್ಯರ ಮೇಲೆ ಮಾಡಿದ ಆರೋಪಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದರು.ತಹಸೀಲ್ದಾರ ಮಹ್ಮದ್ ಜುಬೈರ್ ಚುನಾವಣಾಧಿಕಾರಿಯಾಗಿ ಆಗಮಿಸಿದ್ದರು.

ಉಪಾಧ್ಯಕ್ಷ ಮಹೇಶ ಮಲ್ಲಾಪೂರ, ಸಣ್ಣತಮ್ಮಪ್ಪ ಬಾರ್ಕಿ, ಕರಬಸಪ್ಪ ಭರಡಿ, ಮಂಜುನಾಥ ಲಿಂಗದಹಳ್ಳಿ, ಸೋಮನಗೌಡ ಹಾದಿಮನಿ, ಶರಶ್ಚಂದ್ರ ದೊಡ್ಮನಿ, ವೆಂಕಟೇಶ ಬಣಕಾರ, ನೀಲವ್ವ ನೀಲಪ್ಪ ಕೂನಬೇವು, ಬಸವಣ್ಣೆವ್ವ ಯಲಿಗಾರ, ನಾಗರಾಜ ಪಾಟೀಲ, ರಾಮಣ್ಣಲಮಾಣಿ  ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ಅನಿಲಕುಮಾರಿ ಸ್ವಾಗತಿಸಿದರು. ದೊಡ್ಡಮನಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.