ADVERTISEMENT

ಎರಡು ಕಾರು ಭಸ್ಮ; ರೂ 5 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 9:45 IST
Last Updated 16 ಮಾರ್ಚ್ 2012, 9:45 IST

ಹಾವೇರಿ:  ಎರಡು ಪ್ರತ್ಯೇಕ ಬೆಂಕಿ ಹೊತ್ತಿದ ಪ್ರಕರಣಗಳಲ್ಲಿ ಎರಡು ಕಾರುಗಳು ಸುಟ್ಟು ಸುಮಾರು 5 ಲಕ್ಷ ರೂ. ಹಾನಿಯಾದ ಘಟನೆ ಬುಧವಾರ ನಡೆದಿದೆ.

ಹಾನಗಲ್ ತಾಲ್ಲೂಕಿನ ಮಕರವಳ್ಳಿ-ಗೋಂದಿ ಕ್ರಾಸ್ ಬಳಿ ಚಲಿಸುತ್ತಿದ್ದ ಇಂಡಿಕಾ ಕಾರ್‌ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸುಟ್ಟು ಹೋಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬ್ಯಾಡಗಿಯ ಮಾಲತೇಶ ರಾಮಪ್ಪ ಬೆನ್ನೂರ ಅವರ ಕಾರು ಬೆಂಕಿಗೆ ಆಹುತಿಯಾಗಿದ್ದು, ಬ್ಯಾಡಗಿಯಿಂದ ಹಾನಗಲ್ ತಾಲ್ಲೂಕು ಶಿರಗೋಡ ಗ್ರಾಮಕ್ಕೆ ತೆರಳುತ್ತಿದ್ದಾಗ ಕಾರಿನ ವೈಯರ್‌ಗಳು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಕಾರು ಸುಟ್ಟು ಹೋಗಿದೆ.

ಈ ಘಟನೆಯಿಂದ ಸುಮಾರು 2 ಲಕ್ಷ ರೂ. ಹಾನಿಯಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಘಟನೆಯಲ್ಲಿ ಹಾವಣಗಿಯಿಂದ ಅಕ್ಕಿಆಲೂರು ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯ ಮೇಲೆ ನಿಲ್ಲಿಸಿದ ಕಾರಿಗೆ ಬೆಂಕಿ ತಗುಲಿ ಸುಟ್ಟು ಹೋಗಿದಡೆ. ಶಿರಸಿ ತಾಲ್ಲೂಕು ದಾಸನಕೊಪ್ಪ ಗ್ರಾಮದ ಬಸವರಾಜ ಯಲ್ಲಪ್ಪ ಸಿದ್ದಮ್ಮನವರ ಎಂಬುವವರ ಓಮಿನಿ ಕಾರು ಸುಟ್ಟು ಹೋಗಿದ್ದು, ಸುಮಾರು 2.90 ಲಕ್ಷ ರೂ. ಹಾನಿಯಾಗಿದೆ ಎಂದು ಹೇಳಲಾಗಿದೆ.

ಹೊಲದಲ್ಲಿ ಭತ್ತದ ಹುಲ್ಲು ಒಕ್ಕಲು ಮಾಡುವುದಕ್ಕಾಗಿ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಅವಸರದಲ್ಲಿ ಗಾಡಿಯ ಕೀ ಯನ್ನು ಆನ್ ಮಾಡಿ ಇಟ್ಟು ಹೋಗಿದ್ದಾಗ ವೈಯರ್‌ಗಳು ಒಂದಕ್ಕೊಂದು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ ಬಂಧನ: ರಾಣೆಬೆನ್ನೂರು ತಾಲ್ಲೂಕು ಗುಡ್ಡದಆನ್ವೇರಿ ಗ್ರಾಮದಲ್ಲಿ ಅನದೀಕೃತವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬೀರಪ್ಪ ಹುಚ್ಚಪ್ಪ ಕುದರಿಹಾಳ ಎಂಬುವನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪಿ.ಎಸ್.ಐ ಶ್ರೀಶೈಲ ಚೌಗಲಾ ದಾಳಿ ನಡೆಸಿ ಅಕ್ರಮವಾಗಿ ಮಾರಾಟ ಮಾಡಲು ಇಟ್ಟುಕೊಂಡಿದ್ದ ವಿಂಡ್ಸರ್ ಕಂಪೆನಿಯ 31 ಕ್ವಾಟರ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ, ಐವರ ಬಂಧನ: ಬ್ಯಾಡಗಿ ತಾಲ್ಲೂಕು ಕುರ್ದಕೋಡಿಹಳ್ಳಿ ಗ್ರಾಮದ ಈಶ್ವರ ದೇವಸ್ಥಾನದ ಬಯಲಿನಲ್ಲಿ ಅಂದರ-ಬಾಹರ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಬಂಧಿಸಿ ಅವರಿಂದ 4,500 ರೂ. ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.

ಗ್ರಾಮದ ಪ್ರಕಾಶ ಡಿಳ್ಳೆಪ್ಪ ಗುಡಗೂರ ಸೇರಿ ಐವರು ಸೇರಿಕೊಂಡು ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬ್ಯಾಡಗಿ ಪಿಎಸ್‌ಐ ಕಲ್ಲಮ್ಮನವರ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆಟಕ್ಕೆ ತೊಡಗಿಸಿದ್ದ ಹಣ ಹಾಗೂ ಇಸ್ಪೀಟ್ ಎಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.