ADVERTISEMENT

ಎಲೆಬಳ್ಳಿ ನಾಶ: ಲಕ್ಷಾಂತರ ರೂ ಹಾನಿ

​ಪ್ರಜಾವಾಣಿ ವಾರ್ತೆ
Published 3 ಮೇ 2011, 10:35 IST
Last Updated 3 ಮೇ 2011, 10:35 IST
ಎಲೆಬಳ್ಳಿ ನಾಶ: ಲಕ್ಷಾಂತರ ರೂ ಹಾನಿ
ಎಲೆಬಳ್ಳಿ ನಾಶ: ಲಕ್ಷಾಂತರ ರೂ ಹಾನಿ   

ಗಜೇಂದ್ರಗಡ: ಒಂದು ಗಂಟೆಗೂ ಹೆಚ್ಚು ಕಾಲ ಬೀಸಿದ ಬಿರುಗಾಳಿಗೆ ಗ್ರಾಮದ 15ಕ್ಕೂ ಹೆಚ್ಚು ತಗಡಿನ ಶೆಡ್ಡು ಹಾರಿ ಹೋಗಿದ್ದು, ಏಳು ವಿದ್ಯುತ್ ಕಂಬಗಳು ಸೇರಿದಂತೆ ಸಾಕಷ್ಟು ಗಿಡ-ಮರ-ಬಳ್ಳಿಗಳು ನೆಲಕ್ಕುರುಳಿ ಅಂದಾಜು ರೂ. 5ಲಕ್ಷಕ್ಕೂ ಹೆಚ್ಚು ಹಾನಿಯಾಗಿರುವ ಘಟನೆ ಇಲ್ಲಿಗೆ ಸಮೀಪದ ರುದ್ರಾಪೂರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ರಾತ್ರಿ ಎಂಟು ಗಂಟೆಗೆ ಆರಂಭವಾದ ವಾಯುದೇವನ ರುದ್ರನರ್ತನ ನೋಡು ನೋಡತ್ತಿದ್ದಂತೆ ಆರ್ಭಟವನ್ನು ಹೆಚ್ಚಿಸಿಕೊಂಡು ಗ್ರಾಮಸ್ಥರಲ್ಲಿ ಭಯಭೀತಿಯನ್ನು ಉಂಟು ಮಾಡಿದ. ಜನರು ಮನೆಯಿಂದ ಆಚೆ ಬರದಂತ ಸ್ಥಿತಿ ನಿರ್ಮಾಣ ಮಾಡಿಬಿಟ್ಟ.

ಕೆಲವೇ ಕ್ಷಣಗಳಲ್ಲಿ ಗ್ರಾಮದಲ್ಲಿನ ಏಳ ವಿದ್ಯುತ್ ಕಂಬಗಳು ನೆಲಕ್ಕುರುಳಿದವು. ಅದರಲ್ಲಿ ಕೆಲ ಕಂಬಗಳು ಮನೆಗಳ ಮೇಲೆ ಬಿದ್ದು ತಗಡುಗಳೆಲ್ಲ ಜಜ್ಜಿ ಹೋದವು. 15ಕ್ಕೂ ಹೆಚ್ಚು ತಗಡಿನ ಛಾವಡಿ ಹಾರಿ ಹೋಗಿ ಗ್ರಾಮದ ಹೊರವಲಯದಲ್ಲಿ ತಗಡುಗಳು ಬಿದ್ದವು.

10 ರಿಂದ 12 ಎಕರೆ ಎಲೆ ಬಳ್ಳಿಗಳು ಬಾಗಿ ಬೆಂಡಾಗಿವೆ. ಎಲೆ ಬಳ್ಳಿಯ ರಕ್ಷಣೆಗಾಗಿ ಸುತ್ತಲು ಹಚ್ಚಲಾಗಿದ್ದ ಬಾಳೆಗಿಡಗಳು ಮುರಿದು ಬಿದ್ದಿವೆ. ಗಾಳಿಯ ರಭಸಕ್ಕೆ ಬೃಹತ್ ಮಾವಿನಮರವೊಂದು ಮುರಿದು ಇಪ್ಪತ್ತು ಅಡಿಗಿಂತಲೂ ದೂರಕ್ಕೆ ತೂರಿ ಬಿದ್ದಿದೆ.

ಎಲೆ ಬಳ್ಳಿ, ಗಿಡಗಳು, ಮನೆಗಳಿಗೆ ಆಗಿ ರುವ ಹಾನಿ ಸೇರಿದರೆ ಅಂದಾಜು 5 ಲಕ್ಷ ಕ್ಕಿಂತಲೂ ಹೆಚ್ಚಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಣ ಹಾನಿ ಇಲ್ಲ: ಬಿರುಗಾಳಿಯಿಂದಾಗಿ ಗ್ರಾಮದ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಗ್ರಾಮಸ್ಥರ ಅದೃಷ್ಟ ಎಂಬಂತೆ ಗಾಳಿ ಬೀಸಲು ಆರಂಭ ಗೊಳ್ಳುವ ಕೆಲವೇ ನಿಮಿಷಗಳ ಮುಂಚೆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ  ಕಡಿತವಾ ಗಿತ್ತು. ಇಲ್ಲದಿದ್ದಲ್ಲಿ ಅನೇಕರಿಗೆ ವಿದ್ಯುತ್ ಹೊಡೆದು ಜೀವಹಾನಿ ಆಗುವ ಸಂಭವಿ ವಿತ್ತು ಎಂದು ಗ್ರಾಮದ ಚನ್ನಯ್ಯ ಹಿೀಮಠ, ಪ್ರಕಾಶ ಚಿಣಿ ಆತಂಕದಿಂದ ಹೇಳಿದರು.

ತೂರಿ ಹೋದ ಮೇವಿನ ಬಣವಿಗಳು: ಜೋರಾಗಿ ಬೀಸಿದ ಗಾಳಿಯ ಹೊಡೆತಕ್ಕೆ ಗ್ರಾಮದ ಹೊರವಲಯದಲ್ಲಿ ಇದ್ದ 15ಕ್ಕೂ ಹೆಚ್ಚು ಮೇವಿನ ಬಣವಿಗಳು ತೂರಿ ಹೋಗಿವೆ. ಎರಡರಿಂದ ಮೂರು ಟ್ರ್ಯಾಕ್ಟರ್‌ನಷ್ಟಿದ್ದ ಒಂದೊಂದು ಬಣವಿ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅದೇ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಸುರಿದ ಮಳೆಯಿಂದಾಗಿ ಮೇವು ತೊಯ್ದು ಹಾಳಾಗಿದೆ ಎಂದು ರೈತ ಮಲ್ಲಪ್ಪ ಚಿಣಿ, ಬಸವಂತಪ್ಪ ಮುತಾರಿ ತಿಳಿಸಿದರು.

ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ: ಗ್ರಾಮದಲ್ಲಿ 10ರಿಂದ 12 ಎಕರೆ ಎಲೆ ಬಳ್ಳಿ ಇದೆ. ಬಳ್ಳಿ ತುಂಬ ಎಲೆ ತುಂಬಿಕೊಂಡು ಹಚ್ಚ ಹಸಿರಿನಿಂದ ಕಂಗೊ ಳಿಸುತ್ತಿದ್ದ ಎಲೆ ಬಳ್ಳಿಗಳು ಭಾನುವಾರ ರಾತ್ರಿಯ  ಬಿರುಗಾಳಿಗೆ ಸಿಕ್ಕು ಬಹುತೇಕ ನಾಶವಾಗಿವೆ. ಇದರಿಂದ ರೈತರಿಗೆ ಕೈಗೆ ಬಂದು ತುತ್ತು ಬಾಯಿಗೆ ಬರದಂತಾಗಿದೆ ವೀಳ್ಯದೆಲೆ ಬೆಳೆಗಾರ ಬಸಪ್ಪ ಕಡಿವಾಲ ನೋವು ತೋಡಿಕೊಂಡರು.

ಬಿರುಗಾಳಿಯಿಂದ ಆಸ್ತಿಪಾಸ್ತಿ ನಷ್ಟ ವಾಗಿರುವ ರುದ್ರಾಪೂರ ಗ್ರಾಮಕ್ಕೆ ಕಂದಾಯ ನಿರೀಕ್ಷಕ ಕುಣ್ಣಿಬಾವಿ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಮಲ್ಲಿಗವಾಡ ಹಾಗೂ ಇತರರು ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.