ADVERTISEMENT

ಎಸಿ ಕಚೇರಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 11:14 IST
Last Updated 25 ಸೆಪ್ಟೆಂಬರ್ 2013, 11:14 IST

ಹಾವೇರಿ: ಜಮೀನು ನೀಡಿದ ಸ್ವಾತಂತ್ರ್ಯ ಹೋರಾಟಗಾರ್ತಿಗೆ ಪರಿಹಾರ ನೀಡಲು ವಿಫಲವಾದ ಹಿನ್ನೆ­ಲೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿ­ಯನ್ನು ಜಿಲ್ಲಾ ಹೆಚ್ಚುವರಿ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ಜಪ್ತಿ ಮಾಡಿದ ಘಟನೆ ಮಂಗಳವಾರ ನಡೆದಿದೆ.

ನಗರದ ಸ್ವಾತಂತ್ರ್ಯ ಹೋರಾಟ­ಗಾರ್ತಿ 92 ವರ್ಷದ ಗಿರಿಜವ್ವ ಕರಿ­ಯಪ್ಪ ಹೊಸಮನಿ ಎಂಬುವವರಿಗೆ ಸೇರಿದ ಏಳುಗುಂಟೆ ಜಾಗೆಯನ್ನು ರಸ್ತೆ­ಗಾಗಿ ಸ್ವಾಧೀನ ಪಡಿಸಿಕೊ­ಳ್ಳಲಾ­ಗಿತ್ತು. ಆದರೆ, ಸಂತ್ರಸ್ತೆಗೆ ಪರಿಹಾರ ನೀಡಿರ­ಲಿಲ್ಲ. ಪರಿಹಾರ ನೀಡುವಂತೆ ನ್ಯಾಯಾ­ಲಯ ಆದೇಶ ಮಾಡಿದ್ದರೂ, ಪರಿ­ಹಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದ­ರಿಂದ ನ್ಯಾಯಾಲಯದ ಆದೇಶದಂತೆ ಕಚೇರಿಯಲ್ಲಿದ್ದ ಉಪವಿಭಾಗಾ­ಧಿಕಾ­ರಿಗಳ ಕುರ್ಚಿ, ಸೇರಿದಂತೆ ಸಿಬ್ಬಂದಿ ಕುರ್ಚಿ, ಟೇಬಲ್‌, ಕಂಪ್ಯೂಟರ್‌, ಪ್ರಿಂಟರ್‌. ಸ್ಕಾನರ್‌ ಸೇರಿದಂತೆ ಕಚೇರಿ­ಯಲ್ಲಿದ್ದ ಎಲ್ಲ ವಸ್ತುಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಕಚೇರಿಯಲ್ಲಿನ ಎಲ್ಲ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದರಿಂದ ಉಪವಿಭಾಗಾ­ಧಿಕಾರಿ ಮಹ್ಮದ್‌ ಜುಬೇರ್‌ ಸೇರಿದಂತೆ ಕಚೇರಿ ಸಿಬ್ಬಂದಿ ಕುಳಿತುಕೊಳ್ಳಲು, ಕಾರ್ಯ ನಿರ್ವಹಿಸಲು ಕುರ್ಚಿಗಳಿಲ್ಲ­ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಕರಣದ ಹಿನ್ನೆಲೆ: ಹಾವೇರಿಯ ಹೊಸಮನಿ ಸಿದ್ದಪ್ಪ ಅವರ ಮೊಮ್ಮ­ಗಳಾದ ಗಿರಿಜವ್ವ ಹೊಸಮನಿ ಅವರ ಏಳು ಗುಂಟೆ ಜಾಗೆಯನ್ನು 1967 ರಲ್ಲಿ ಹಾವೇರಿ ಎಪಿಎಂಸಿ–ಗಣಜೂರು ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳ­ಲಾಗಿತ್ತು. ಭೂಸ್ವಾಧೀನ ಸಂದರ್ಭದಲ್ಲಿ ಪರಿಹಾರ ನೀಡುವುದಾಗಿ ಹೇಳಿದ್ದರೂ, ಪರಿಹಾರ ಮಾತ್ರ ನೀಡದೇ ನಿರ್ಲಕ್ಷ್ಯ ವಹಿಸಿತ್ತು. ಆಗ ಗಿರಿಜವ್ವ ಪರಿಹಾರಕ್ಕೆ ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ಪ್ರಕರಣದ ವಿಚಾರಣೆ ನಡೆಸಿ ಜಿಲ್ಲಾ ಹೆಚ್ಚುವರಿ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರು 2010 ರಲ್ಲಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದರು. ನ್ಯಾಯಾಲಯದ ಆದೇಶದ ನಂತರವೂ ಉಪವಿಭಾಗಾಧಿಕಾರಿ ಕಚೇರಿಯಿಂದ ಗಿರಿಜವ್ವಳಿಗೆ ಪರಿಹಾರ ಮಾತ್ರ ಸಿಗಲಿಲ್ಲ. ಇದಕ್ಕೆ ಬೇಸತ್ತು ತನಗೆ ಪರಿಹಾರ ಕೊಡಿಸಬೇಕು ಎಂದು ನ್ಯಾಯಾಲಯಕ್ಕೆ ಮರು ಅರ್ಜಿ ಸಲ್ಲಿಸಿದರು.

ಗಿರಿಜವ್ವಳ ಅರ್ಜಿಯನ್ನು ಪುರಸ್ಕ­ರಿಸಿದ ನ್ಯಾಯಾಲಯವು, 2012 ರಲ್ಲಿ ಕೂಡಲೇ ಪರಿಹಾರ ನೀಡಬೇಕು ಇಲ್ಲವಾದರೆ, ಕಚೇರಿ ಜಪ್ತಿ ಮಾಡಿ­ಸಲಾಗುವುದು ಎಂದು ಎಚ್ಚರಿಕೆ ಆದೇಶ ನೀಡಿತು. ಆಗಲೂ ಆದೇಶಕ್ಕೆ ಯಾವುದೇ ಮಾನ್ಯತೆ ನೀಡದೇ ಉಪವಿ­ಭಾಗಾಧಿಕಾರಿ ನಿಷ್ಕಾಳಜಿ ತೋರಿ­ಸಿತ್ತು. ಇದರಿಂದ ಆಕ್ರೋಶ­ಗೊಂಡ ನ್ಯಾಯಾ­ಲಯ 2013, ಜುಲೈ 27 ರಂದು ಪರಿಹಾರದ ಹಣ, ಬಡ್ಡಿ ಸೇರಿ ಒಟ್ಟು 39,29,727 ರೂಪಾಯಿ ತಕ್ಷಣವೇ ನೀಡಬೇಕು ಎಂದು ಸೂಚಿಸಿತು.

ಉಪವಿಭಾಗಾಧಿಕಾರಿಗಳು ಒಂದು ತಿಂಗಳೊಳಗಾಗಿ ಸಂತ್ರಸ್ತೆಗೆ ಹಣ ಸಂದಾಯ ಮಾಡುವುದಾಗಿ ನ್ಯಾಯಾ­ಲಯಕ್ಕೆ ಲಿಖಿತ ಹೇಳಿಕೆ ನೀಡಿದ್ದರು. ಒಂದು ತಿಂಗಳು ಮುಗಿದ ಮೇಲೆಯೂ ಹಣ ನೀಡದೇ ಇದ್ದಾಗ, ನ್ಯಾಯಾ­ಲಯದ ಆದೇಶದಂತೆ ಕಚೇರಿಯನ್ನು ಜಪ್ತಿ ಮಾಡಲಾಯಿತು.
 
ಸ್ವಾತಂತ್ರ್ಯ ಹೋರಾಟಗಾರ್ತಿ ಗಿರಿ­ಜವ್ವ ಹೊಸಮನಿ ಪರ ವಕೀಲ ಅಶೋಕ ನೀರಲಗಿ ವಕಾಲತ್ತು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.