ADVERTISEMENT

ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ

ತಾಂತ್ರಿಕ ಶಿಕ್ಷಣ ಇಲಾಖೆ ನೀತಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 7:12 IST
Last Updated 20 ಜುಲೈ 2013, 7:12 IST

ಹಾವೇರಿ: ತಾಂತ್ರಿಕ ಶಿಕ್ಷಣ ಇಲಾಖೆ ಅವೈಜ್ಞಾನಿಕ ನೀತಿ ಖಂಡಿಸಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳ ಸಮಸ್ಯೆ ಬಗೆ ಹರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿ ಕಾರ್ಯಕರ್ತರು ಶುಕ್ರವಾರ ನಗರದ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐ ಕಾರ್ಯಕರ್ತರು ಹಾಗೂ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ಕ್ಯಾರಿ ಓವರ್ ಪದ್ಧತಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, `ತಾಂತ್ರಿಕ ಶಿಕ್ಷಣ ಮಂಡಳಿಯ ಕೆಲವು ಅವೈಜ್ಞಾನಿಕ ನೀತಿಗಳಿಂದ ಸಾವಿರಾರು ಡಿಪ್ಲೊಮಾ ವಿದ್ಯಾರ್ಥಿಗಳು ಬೀದಿಪಾಲಾಗುವ ಪರಿಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳಿಗೆ ಹೊರಲಾರದಷ್ಟು ಕಠಿಣ ಮತ್ತು ಅವೈಜ್ಞಾನಿಕ ಪಠ್ಯಕ್ರಮ, ಪರೀಕ್ಷಾ ನೀತಿ ಜಾರಿಗೊಳಿಸಿದೆ' ಎಂದು ಹೇಳಿದರು.

`ಇಡೀ ರಾಜ್ಯದಲ್ಲಿ ಹೊಸ ಪಠ್ಯಕ್ರಮಕ್ಕನುಗುಣವಾಗಿ ಬೋಧನೆ ಮಾಡುವ ಅರ್ಹ ಪ್ರಾಧ್ಯಾಪಕರ ಕೊರತೆಯಿದೆ ಹಾಗೂ ಅದಕ್ಕೆ ಬೇಕಾಗುವ ಅಧ್ಯಯನ ಸಾಮಾಗ್ರಿಗಳ  ಕೊರತೆಯಿದೆ. ಪರಿಣಾಮವಾಗಿ ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ. ಮುಂದಿನ ಸೆಮಿಸ್ಟರ್‌ನಲ್ಲಿ ಮುಂದುವರಿಯಲು ಅರ್ಹತೆಬೇಕೆಂಬ ಹೆಸರಿನಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡುತ್ತಿರುವ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಕ್ರಮ ಖಂಡನೀಯ' ಎಂದರು.

`ರಾಜ್ಯದಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ಸಂಪೂರ್ಣವಾಗಿ ಮಾರಾಟವಾಗುತ್ತಿದೆ ಮತ್ತು ಖಾಸಗೀಕರಣದ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ವಿಪರೀತ ಶುಲ್ಕ ವಸೂಲಿ, ಹಾಜರಾತಿ, ಆಂತರಿಕ ಅಂಕಗಳು ನೆಪವೊಡ್ಡಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಹಣ ಸುಲಿಗೆ ಯಥೇಚ್ಛವಾಗಿ ನಡೆಯುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ರಾಜ್ಯದ ಅನೇಕ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಹೊಸದಾಗಿ ರೂಪಿಸಿರುವ ಪಠ್ಯಕ್ರಮ, ಪರೀಕ್ಷಾ ನೀತಿಗಳು, ತರಗತಿಗಳು ಮುಗಿಯುವ ಮುನ್ನವೇ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಈ ಕಾರಣಗಳಿಂದ ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ' ಎಂದು ಹೇಳಿದರು.

ಎಸ್‌ಎಫ್‌ಐ ರಾಜ್ಯ ಉಪಾದ್ಯಕ್ಷ ನಾರಾಯಣ ಕಾಳೆ ಹಾಗೂ ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ ಮಾತನಾಡಿ, `ಸರ್ಕಾರ ತಕ್ಷಣ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿರುವ ಅವ್ಯವಸ್ಥೆಯನ್ನೂ ಸರಿಪಡಿಸಿ, ಕಾಲೇಜುಗಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು' ಎಂದು ಒತ್ತಾಯಿಸಿದರು.

`ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಅನ್ನು ಪದವಿಯಂತೆ ಸಂಪೂರ್ಣ ಮೂರು ವರ್ಷ ಮುಂದಿನ ತರಗತಿಗಳಿಗೆ ಪ್ರವೇಶ ಪಡೆಯಲು, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಅವೈಜ್ಞಾನಿಕ ಹೊಸ ಪಠ್ಯಕ್ರಮವನ್ನು ಸರಳೀಕರಿಸಬೇಕು.  ಸೆಮಿಸ್ಟರ್‌ವೊಂದರಲ್ಲಿ ಕನಿಷ್ಠ ನಾಲ್ಕು ತಿಂಗಳು ಕಡ್ಡಾಯವಾಗಿ ತರಗತಿಗಳು ನಡೆಯುವಂತೆ ನೋಡಿಕೊಳ್ಳಬೇಕು. ಪರೀಕ್ಷಾ, ಮರು ಮೌಲ್ಯಮಾಪನ, ಇನ್ನಿತರ ಶುಲ್ಕಗಳನ್ನು ಕಡಿತಗೊಳಿಸಬೇಕು' ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡ ಚಂದ್ರು ಪೂಜಾರಿ, ಬಸವರಾಜ ವಡ್ಡರ, ಮಲ್ಲಿಕಾರ್ಜುನ ಹಿರೇಮಠ, ಶೀತಲ ಹನಮನಹಳ್ಳಿ, ಆನಂದ , ಶ್ರೀಕಾಂತ ಮಲ್ಲಾಡದ, ಎಸ್.ಎಸ್, ವೀರೇಶ. ಎಸ್. ಸುನೀಲ್. ವಿ.ಜಿ, ನಾಗರಾಜ ಗಾಣಿಗೇರ, ಚಂದ್ರು ಶಂಕ್ರಪ್ಪನವರ ಅಲ್ಲದೇ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.