ADVERTISEMENT

ಓಟ ಕಿತ್ತ ದನ; ಬೆದರಿದ ಜನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 11:25 IST
Last Updated 4 ಜನವರಿ 2011, 11:25 IST

ಅಕ್ಕಿಆಲೂರ: ಹೊಸ ವರ್ಷದ ಪ್ರಯುಕ್ತ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ದನ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನೂರಾರು ಹೋರಿಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ನೆರೆದ ಸಹಸ್ರಾರು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಬೆಳಿಗ್ಗೆ 10ರಿಂದ ಆರಂಭವಾದ ಸ್ಪರ್ಧೆಯಲ್ಲಿ ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಸುಮಾರು 250ಕ್ಕೂ ಹೆಚ್ಚು ಹೋರಿಗಳು ಭಾಗವಹಿಸಿದ್ದವು. ಜೂಲ, ಬೆಳ್ಳಿ ಕೊಂಬಣಸು, ಜರತಾರಿ ಪಟ, ನವಿಲುಗರಿ, ರಿಬ್ಬನ್ನು ಸೇರಿದಂತೆ ಹಲವು ಸಿಂಗಾರದ ವಸ್ತುಗಳನ್ನು ಧರಿಸಿದ್ದ ಹೋರಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿತ್ತು.

ಕ್ಷಣ ಹೊತ್ತಿನಲ್ಲಿ ಭೂಮಿ ಬಿರಿಯುವಂತೆ ರಭಸದಿಂದ ಓಟಕ್ಕೆ ನಿಲ್ಲುತ್ತಿದ್ದ ಹೋರಿಗಳ ಪ್ರದರ್ಶನ ನೆರೆದವರ ಮೈ ಜುಮ್ ಎನ್ನಿಸುವಂತಿತ್ತು. ಜನರಿದ್ದ ಗುಂಪಿನ ಮಧ್ಯದಲ್ಲಿಯೇ ಹೋರಿಗಳು ಓಡುತ್ತಿದ್ದ ಪರಿ ಅಚ್ಚರಿ ಮೂಡಿಸುತ್ತಿತ್ತು. ಸ್ಪರ್ಧೆ ಆರಂಭವಾಗುವ ಸ್ಥಳಕ್ಕೆ ಹೋರಿಗಳನ್ನು ಹಿಡಿದು ತಂದು ಬಿಟ್ಟಾಗ ಕ್ಷಣಹೊತ್ತು ಹೋರಿಗಳು ಅತ್ತಿತ್ತ ಕಣ್ಣು ಹಾಯಿಸಿ ಜನರಿದ್ದಲ್ಲಿಗೇ ದೌಡಾಯಿಸುವ ಮೂಲಕ ದುಗುಡ ಹುಟ್ಟಿಸಿದವು.

ಇದಕ್ಕೂ ಮೊಕು ಸ್ಥಳೀಯ ವಿರಕ್ತಮಠದ ಉತ್ತರಾಧಿಕಾರಿ ಶಿವಬಸವ ದೇವರು ಸ್ಪರ್ಧೆ ಉದ್ಘಾಟಿಸಿದರು.  ಸದಾಶಿವ ಬೆಲ್ಲದ, ಪ್ರಕಾಶಗೌಡ ಪಾಟೀಲ, ರವಿಕುಮಾರ ಬೆಲ್ಲದ, ಶಿವನಗೌಡ ಪಾಟೀಲ, ಉದಯ ವಿರಪಣ್ಣನವರ, ಟಾಕನಗೌಡ ಪಾಟೀಲ, ಶರತ ಸಣ್ಣವೀರಪ್ಪನವರ, ಮತ್ತಿತರರು ಇದ್ದರು. ಉತ್ತಮ ಸಾಧನೆ: ಹಾವೇರಿಯಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಟಿಎಲ್‌ಎಂ ಹಾಗೂ ಮೆಟ್ರಿಕ್ ಮೇಳದಲ್ಲಿ ಹಿರೇಹುಲ್ಲಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಉತ್ತಮ ಸಾಧನೆ ತೋರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹಿಂದಿ ಕಲಿಕೋಪಕರಣ ಸ್ಪರ್ಧೆಯಲ್ಲಿ ಶಾಲೆಯ ಶಿಕ್ಷಕ ಎಸ್.ಕೆ.ಶಿಕಾರಿಪುರ ದ್ವಿತೀಯ ಹಾಗೂ ಎಂ.ಎಫ್.ತುಮ್ಮಣ್ಣನವರ ಗಣಿತ ವಿಷಯದ ಕಲಿಕೋಪಕರಣದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಶಾಲಾ ಸಿಬ್ಬಂದಿ ಅಭಿನಂದನೆ ಸಲ್ಲಿಸಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶೇಷಗಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನರಸಿಂಹ ಶ್ರೀಕಾಂತ ಭೀಮಶಾಗೋಳ ಉತ್ತಮ ಸಾಧನೆ ಮಾಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.