ADVERTISEMENT

ಕಟುಕರ ಕೈ ಸೇರಿದ ಜಾನುವಾರು ಜೀವ (ಅರೆಮಲೆನಾಡ ಬರದ ಬವಣೆ)

​ಪ್ರಜಾವಾಣಿ ವಾರ್ತೆ
Published 1 ಮೇ 2012, 6:40 IST
Last Updated 1 ಮೇ 2012, 6:40 IST
ಕಟುಕರ ಕೈ ಸೇರಿದ ಜಾನುವಾರು ಜೀವ (ಅರೆಮಲೆನಾಡ ಬರದ ಬವಣೆ)
ಕಟುಕರ ಕೈ ಸೇರಿದ ಜಾನುವಾರು ಜೀವ (ಅರೆಮಲೆನಾಡ ಬರದ ಬವಣೆ)   

ಬ್ಯಾಡಗಿ: ರಾಜ್ಯ ಸರ್ಕಾರ ತಾಲ್ಲೂಕನ್ನು ಬರ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆ ಗೊಳಿಸಿದ್ದರೂ, ಅಂತಹ ಬರದ ತೀವ್ರತೆ ಮಾತ್ರ ಎಲ್ಲಿಯೂ ಕಂಡು ಬಂದಿಲ್ಲ.

ಪ್ರತಿ ಬೇಸಿಗೆಯಲ್ಲಿ ಇರುವಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ  ಕೆರೆ ಕಟ್ಟೆಗಳು ಒಣಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದರೆ, ನೀರಿಗಾಗಿ ಹಾಹಾಕಾರವಿಲ್ಲ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಕೃತಕ ಅಭಾವ ಹೆಚ್ಚಾಗಿದೆ. ಅನಿಯಮಿತ ವಿದ್ಯುತ್ ಪೂರೈಕೆ, ಹಲವು ದಿನಗಳ ನಿರಂತರ ವಿದ್ಯುತ್ ಕಡಿತ, ದೋಷಪೂರಿತ ಪರಿವರ್ತಕಗಳು, ಶಿಥಿಲವಾದ ವಿದ್ಯುತ್ ಮಾರ್ಗಗಳು, ನೀರಿನ ವಿತರಣೆಯಲ್ಲಿ ದೋಷಗಳು ಹಾಗೂ ಪಂಚಾಯಿತಿ ಯ ಬೇಜವಾಬ್ದಾರಿ ಹತ್ತಾರು ಸಮಸ್ಯೆಗಳನ್ನು ಹುಟ್ಟುಹಾಕಿದೆ.

ನೀರಿನ ಮೂಲಗಳಾದ ಕೆರೆ, ಹಳ್ಳಗಳು ಸಂಪೂರ್ಣ ಬತ್ತಿದ್ದರಿಂದ ಸಹಜವಾಗಿ ಕೃಷಿ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರಿದೆ. ಇಳುವರಿಯಲ್ಲಿ ಗಣನೀಯ ಕುಸಿತ ಕಂಡಿದೆ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಉಲ್ಬಣವಾಗಿದೆ. ಬಹುತೇಕ ಗ್ರಾಮಗಳಲ್ಲಿ ದನಕರುಗಳಿಗೆ ಮೇವು ಇಲ್ಲದ ಕಾರಣ ಜನರು ಅವುಗಳನ್ನು ಸಾಕಲಾಗದೇ ಮಾರಾಟ ಮಾಡಲು ಮುಂದಾಗಿದ್ದಾರೆ.

 ತಾಲ್ಲೂಕಿನಲ್ಲಿ ಮೇವಿನ ಕೊರತೆ ಉಂಟಾಗಿದ್ದು, `ನಮಗೆ ಮೇವಿನ ಸಮಸ್ಯೆ ಇಲ್ಲದಿದ್ದರೆ, ವರ್ಷಪೂರ್ತಿ ನಮ್ಮ ಸಂಗಾತಿಗಳಾದ ಎತ್ತುಗಳನ್ನು, ಆಕಳು, ಎಮ್ಮೆಗಳನ್ನು ಏಕೆ ಮಾರಾಟ ಮಾಡುತ್ತಿದ್ದೆವು. ಒಂದು ಟ್ರ್ಯಾಕ್ಟರ್ ಹುಲ್ಲಿಗೆ 6 ರಿಂದ 8 ಸಾವಿರ ರೂ. ಕೊಟ್ಟು ತರಬೇಕು. ಅಷ್ಟೊಂದು ಹಣ ನೀಡಿದರೂ ಗುಣಮಟ್ಟದ ಹುಲ್ಲು ಸಿಗುವುದಿಲ್ಲ. ಅದು ದನಗಳ ಹೊಟ್ಟೆಗೆ ಸಾಕಾಗುವುದಿಲ್ಲ. ವರ್ಷಪೂರ್ತಿ ಚನ್ನಾಗಿ ಮೇಯಿಸಿದ ದನಗಳನ್ನು ಅರೆಹೊಟ್ಟೆ ಆಹಾರ ನೀಡಲು ಮನಸ್ಸು ಒಪ್ಪುತ್ತಿಲ್ಲ. ಅದಕ್ಕಾಗಿಯೇ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ತಾಲ್ಲೂಕಿನ ರೈತ ಕಾಂತೇಶ.

ಇನ್ನೂ ಉದ್ಯೋಗ ಸಮಸ್ಯೆ ಅಷ್ಟಾಗಿ ಕಂಡು ಬರದಿದ್ದರೂ, ಅಲ್ಲಲ್ಲಿ ಜನರು ಉದ್ಯೋಗ ಅರಸಿ ಬೇರೆ ಕಡೆಗೆ ಹೋಗುವುದು ನಡೆಯುತ್ತಲಿದೆ. ಬ್ಯಾಡಗಿಯಲ್ಲಿ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆ ಇರುವುದರಿಂದ ಜನರು ಉದ್ಯೋಗಕ್ಕಾಗಿ ಮಾರುಕಟ್ಟೆಯತ್ತ ಮುಖಮಾಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಡೆಸಿದರೆ ನಮ್ಮೂರ ್ಲಲಿಯೇ ಕೆಲಸ ಮಾಡಬಹುದು. ಉದ್ಯೋಗ ಹುಡುಕಿಕೊಂಡು ಬೇರೆ ಕಡೆ ಅಲೆಯುವುದು ತಪ್ಪುತ್ತದೆ ಎನ್ನುತ್ತಾರೆ ಬ್ಯಾಡಗಿಯ ಮಹೇಶ.

ವ್ಯವಸ್ಥಿತವಾದ ನಿರ್ವಹಣೆ: ತಾಲ್ಲೂಕಿನಲ್ಲಿ ಆವರಿಸುವ ಬರ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿಬಾಯಿಸಲಾಗಿದೆ. ಅಲ್ಪಸ್ವಲ್ಪ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ನೀರಿನ ಸಮಸ್ಯೆ ಇರುವ ತಾಲ್ಲೂಕಿನ ಅರಬಗೊಂಡ, ಕಲ್ಲೆದೇವರು, ಗುಂಡೆನಹಳ್ಳಿ ಕದರಮಂಡಲಗಿ, ಹೊಸ ಶಿಡೇನೂರ ಹಾಗೂ ರಾಮಗೊಂಡನಹಳ್ಳಿ ಗ್ರಾಮಗಳಲ್ಲಿ  ಬೋರವೆಲ್ ಕೊರೆಸಲಾಗಿದ್ದು, ಅವುಗಳಿಗೆ ವಿದ್ಯುತ್ ಹಾಗೂ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿದೆ ಎನ್ನುತ್ತದೆ ತಾಲ್ಲೂಕು ಆಡಳಿತ.

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಸುಮಾರು 6ಗಂಟೆಗಳ ಕಾಲ ತ್ರೀ ಫೇಸ್ ಹಾಗೂ 6ಗಂಟೆಗಳ ಕಾಲ ಸಿಂಗಲ್ ಫೇಸ್ ವಿದ್ಯುತ್ ಸೇರಿದಂತೆ ಒಟ್ಟಾರೆ 12 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಲಭ್ಯವಿರುತ್ತದೆ. ಇದರಿಂದ ನೀರಾವರಿ ಸೌಲಭ್ಯ ಹೊಂದಿದ  ರೈತರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆರ್.ಪಾಟೀಲ ತಿಳಿಸಿದರು.

ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ (ಬರ ಪರಿಹಾರ) ಈಗಾಗಲೇ ಜಿಲ್ಲಾಧಿಕಾರಿಗಳು ರೂ 49.93ಲಕ್ಷ ಹಣ ಬಿಡುಗಡೆ ಮಾಡಿದ್ದು,  15 ಕುಡಿಯುವ ನೀರಿನ ದುರಸ್ತಿ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗಿದೆ. ಹಿರೇ ಅಣಜಿ ಗ್ರಾಮದಲ್ಲಿ ಕೊರೆದಿರುವ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ಸಾರ್ವಜನಿಕರ ದೂರು ನೀಡಿದ್ದರ ಹಿನ್ನೆಲೆ ಪರೀಕ್ಷೆಗೆ ಒಳಪಡಿಸ ಲಾಗಿದೆ. ಶಾಸಕರ ಅನುದಾನದಲ್ಲಿ ಲಭ್ಯವಿರುವ ರೂ 50ಲಕ್ಷ ಹಣವನ್ನೂ ಸಹ   ಕುಡಿಯುವ ನೀರಿನ ಅಗತ್ಯ ಕಾಮಗಾರಿಗಳಿಗೆ ಬಳಸಿಕೊಳ್ಳ ಲಾಗುತ್ತಿದೆ.  ಕೆಲವು ಭಾಗಗಳಲ್ಲಿ ಮೂರು ದಿನ ಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎನ್ನುತ್ತಾರೆ ಪಾಟೀಲ.

ತುಂಬಿಹೋದ ಬ್ಯಾಡಗಿ ದನಗಳ ಮಾರುಕಟ್ಟೆ
ಪ್ರತಿ ಗುರುವಾರ ಬ್ಯಾಡಗಿ ಪಟ್ಟಣದಲ್ಲಿ ನಡೆಯುವ ದನಗಳ ಸಂತೆಯಲ್ಲಿ ವಾರದಿಂದ ವಾರಕ್ಕೆ ಮಾರಾಟ ಮಾಡುವ ದನಗಳ ಸಂಖ್ಯೆ ಹೆಚ್ಚಾಗುತ್ತಿದೆ ದನಗಳ ಮಾರಾಟ ಹೆಚ್ಚಾಗಿದ್ದ ರಿಂದಲೋ ಏನೋ ಸಾಂಗ್ಲಿ, ಮೀರಜ, ಬೆಳಗಾವಿ, ಹುಬ್ಬಳ್ಳಿ ಕಡೆಗಳಿಂದ ಕಟುಕರು ಬ್ಯಾಡಗಿ ದನದ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಆದರೆ ಅಧಿಕಾರಿಗಳ ಪ್ರಕಾರ ಯಾವುದೇ ಮೇವಿನ ಸಮಸ್ಯೆಯಿಲ್ಲ. ಮೇವಿನ ಬ್ಯಾಂಕ್ ಸ್ಥಾಪಿಸುವ ಅಗತ್ಯವಿಲ್ಲ  ಎನ್ನುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.