ADVERTISEMENT

`ಕಬ್ಬು ಸಂಶೋಧನಾ ಕೇಂದ್ರ ಸ್ಥಾಪಿಸಿ'

ಕೃಷಿ ಬೆಲೆ ನಿಗದಿ ಆಯೋಗದ ಸಭೆಯ ಗುರುಮಠ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 8:25 IST
Last Updated 13 ಜೂನ್ 2013, 8:25 IST

ಹಾವೇರಿ:  ರಾಜ್ಯದಲ್ಲಿ ಕಬ್ಬು ಬೆಳೆಯ ಅಧಿಕ ಇಳುವರಿಗಾಗಿ ಉತ್ತಮ ತಳಿಗಳನ್ನು ಅಭಿವೃದ್ಧಿ ಪಡಿಸಲು ಕಬ್ಬು ತಳಿ ಅಭಿವೃದ್ಧಿ ಸಂಶೋಧನಾ ಕೇಂದ್ರಗಳನ್ನು ತೆರೆಯಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಪ್ರಗತಿಪರ ರೈತ ಶಿವಾನಂದ ಗುರುಮಠ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಕೃಷಿ ಬೆಲೆ ನಿಗದಿ ಆಯೋಗವು ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಕಬ್ಬು ಬೆಲೆ ನಿಗದಿ (ಎಫ್.ಆರ್.ಪಿ) ಕುರಿತು ಚರ್ಚಿಸಲು ವಿವಿಧ ರಾಜ್ಯಗಳ ಕಬ್ಬು ಬೆಳೆಗಾರರ ಮುಖಂಡರು ಹಾಗೂ ರಾಜ್ಯಗಳ ಕಬ್ಬು ಅಭಿವೃದ್ಧಿ ನಿರ್ದೇಶಾನಲಯದ ಅಧಿಕಾರಿಗಳ ಜೊತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.

ದೇಶಾದ್ಯಂತ ಕಬ್ಬಿನ ಉತ್ಪಾದನೆ ಪ್ರತಿಶತ 15 ರಿಂದ 20ರಷ್ಟು ಕಡಿಮೆಯಾಗಿದೆ. ರೈತನ ಕಬ್ಬು ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಕರ್ಖಾನೆ ಮಾಲಿಕರು ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸುತ್ತಿಲ್ಲ. ಇದು ಕಬ್ಬಿನ ಉತ್ಪಾದನೆ ಕುಂಠಿತಗೊಳ್ಳುವುದರ ಜತೆಗೆ ಕಬ್ಬು ಬೆಳೆಗಾರ ರೈತರ ಶೋಷಣೆ ಮಾಡುವುದಾಗಿದೆ ಎಂದರು. ಕೇಂದ್ರ ಸರ್ಕಾರವು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಬ್ಬು ಬೆಳೆಗಾರರನ್ನು ಪ್ರೋತ್ಸಹಿಸಲು ಕ್ರಮ ವಹಿಸುವುದು ಅತ್ಯವಶ್ಯಕವಾಗಿದೆ ಎಂದು ಶಿವಾನಂದ ಗುರುಮಠ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರ ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಸಕ್ಕರೆ ಕರ್ಖಾನೆಗಳು ನೀಡುವ ಸಕ್ಕೆರೆ ಇಳುವರಿ ಮತ್ತು ಲಾಭಾಂಶದ ಬಗ್ಗೆ ಪರೀಶೀಲನೆ ನಡೆಸಲು ರಾಜ್ಯಗಳ ಮಟ್ಟದಲ್ಲಿ ತಜ್ಞರ ಸಮಿತಿ ರಚಿಸಬೇಕು, ಕಬ್ಬು ಬೆಳೆಗಾರರ ಪ್ರತಿನಿಧಿಗಳು ಹಾಗೂ ಕಾರ್ಖಾನೆಗಳ ನಡುವೆ ಕಾನೂನು ಬದ್ದ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಯಾಗಬೇಕು. ದೇಶಾದ್ಯಂತ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣ ತಕ್ಷಣವೇ ರೈತರಿಗೆ ಕೊಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರ ಕ್ರಮ ಕೈಗೊಳ್ಳಬೇಕು. ಕಬ್ಬುಬೆಳೆ ವಿಮೆ ಜಾರಿಗೆ ತಂದು ಬೆಳೆವಿಮೆ ಕಂತನ್ನು ರೈತರ ಜೊತೆ ಒಪ್ಪಂದ ಮಾಡಿಕೊಂಡ ಕಾರ್ಖಾನೆಗಳು ಭರಿಸಬೇಕು. (ಪ್ರತಿ ರೈತರ ಜಮೀನಿನಲ್ಲಿಯ ಬೆಳೆವಿಮೆ ಪ್ರತ್ಯೇಕವಾಗಿರಬೇಕು). ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆಯನ್ನು ಕೃಷಿ ಕಾರ್ಯಗಳಿಗೆ ಅಳವಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಡಾ.ಸಿ.ರಂಗರಾಜನ್ ಸಮಿತಿ ವರದಿ ಮತ್ತು ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿಗಳ ಬೆಲೆ ನಿಗದಿಗೊಳಿಸಬೇಕು ಎಂದು ಭಾರತೀಯ ಕಬ್ಬು ಬೆಳೆಗಾರರ ಸಂಘ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು.

ಕೇಂದ್ರ ಕೃಷಿ ಬೆಲೆ ನಿಗದಿ ಆಯೋಗದ ಅಧ್ಯಕ್ಷ ಅಶೋಕ್ ಗುಲಾಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಒಳಗೊಂಡಂತೆ ಪಂಜಾಬ್, ಹರಿಯಾಣ, ತಮಿಳುನಾಡು, ಉತ್ತರ ಪ್ರದೇಶ, ಬಿಹಾರ್ ರಾಜ್ಯಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.