ADVERTISEMENT

ಕಮರಿದ ಬೆಳೆ: ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 11:07 IST
Last Updated 13 ಜುಲೈ 2013, 11:07 IST

ಗುತ್ತಲ:  ಕೃಷಿ ಇಲಾಖೆಯುಕಾಂಚನ ಗಂಗಾ ಸೀಡ್ಸ್ ಕಂಪೆನಿಯಿಂದ ಪಡೆದುಕೊಂಡು  ಈ ಭಾಗದ ರೈತರಿಗೆ ವಿತರಿಸಿದ ವಿವಿಧ ತಳಿಗಳ ಗೋವಿನ ಜೋಳ ಬೀಜ ಫಲ ನೀಡುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಸುಮಾರು ಒಂದು ತಿಂಗಳಿನಿಂದ ಕಾಂಚನ ಗಂಗಾ ಸೀಡ್ಸ್ ಕಂಪೆನಿಯಿಂದ ಬೀಜ ತಳಿಗಳಾದ 115-8-1 ಮತ್ತು ಪೋಲೋ, ಗೋವಿನ ಜೋಳದ ಬೀಜವನ್ನು ಈ ಭಾಗದ ರೈತರು ಸುಮಾರು ಎಕರೆ ಪ್ರದೇಶದಲ್ಲಿ ಬೀಜವನ್ನು ಬಿತ್ತಿದ್ದರು. ಆದರೆ  ಬಿತ್ತಿ ಒಂದೂವರೆ ತಿಂಗಳು ಗತಿಸಿದರೂ, ಬೆಳೆಯಲ್ಲಿ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ ಹಾಗೂ ಕೆಲವು ಜಮೀನುಗಳಲ್ಲಿ ಹಾಕಿದ ಬೀಜ ಹುಟ್ಟಿದೆಯಾದರೂ ವ್ಯತಿರಿಕ್ತವಾದ ಬೆಳವಣಿಗೆ ಅಂದರೆ ಬೆಳೆ ಒಣಗಿ ಅಲ್ಲಿಯೇ ಕಮರುವುದು, ಅಲ್ಲದೆ ಬಿಳಿ, ಹಾಗೂ ಹಳದಿ ರೋಗದ ಬಾಧೆ ಮತ್ತೊಂದೆಡೆ ಬಿತ್ತಿದ ಬೀಜ ಸರಿಯಾಗಿ ಹುಟ್ಟದೇ ಇರುವುದು ಗುತ್ತಲ ಪಟ್ಟಣದ ರೈತರನ್ನು ನಿದ್ದೆ ಕೆಡಿಸಿದೆ.

ಗುತ್ತಲ ಪಟ್ಟಣದ ರೈತರಾದ ಅಜ್ಜಪ್ಪ ಕಾಗಿನೆಲ್ಲಿ 7 ಎಕರೆ ಪ್ರದೇಶದಲ್ಲಿ ಬಿತ್ತಿದರೆ, ಶಿವಪ್ಪ ಕಾಗಿನೆಲ್ಲಿ ಬಸವರಾಜ ಬೆನ್ನೂರ 22 ಎಕರೆ ಪ್ರದೇಶದಲ್ಲಿ ಬಿತ್ತಿದ ಬೆಳೆ ಬೆಳವಣಿಗೆ ಕಂಡು ಬರದಿದ್ದರಿಂದ, ಆತಂಕಗೊಂಡ ಈ ರೈತರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಲ್ಲಿ ಕುಂಠಿತ ಬೆಳವಣಿಗೆಯ ಬಗ್ಗೆ ದೂರು ನೀಡಿದ್ದಾರೆ. ದೂರು ನೀಡಿದ್ದರಿಂದ ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ ರೈತರ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ ಕಾಂಚನ ಕಂಪೆನಿಯಿಂದ ಪಡೆದ ಬೀಜದ ಬೆಳೆಯಲ್ಲಿ ಕುಂಠಿತಗೊಂಡಿದ್ದು ನಿಜವಾಗಿದ್ದು, ಸಮಗ್ರ ವರದಿಯನ್ನು ಕೃಷಿವಿಶ್ವವಿದ್ಯಾಲಯಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಹೇಳಿದ್ದಾರೆ. ಆಲ್ಲದೆ ಕೃಷಿ ವಿಶ್ವ ವಿದ್ಯಾಲಯದ ಪರಿಣತರ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ, ಸಮಗ್ರ ವರದಿಯನ್ನಾಧರಿಸಿ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.

ಸ್ಥಳದಲ್ಲಿಯೇ ಇದ್ದ ಆತಂಕಗೊಂಡ ರೈತರು ಬೇಗನೆ ನಮ್ಮ ಬೆಳಗೆ ಪರಿಹಾರವನ್ನು ಕೊಡಿಸಬೇಕು, ಮುಂದಿನ ಬೆಳೆಯನ್ನಾದರೂ ನಾವು ಬೆಳೆದುಕೊಳ್ಳಲಿಕ್ಕೆ ಅಧಿಕಾರಿಗಳು ಹಾಗೂ ಕಂಪೆನಿಯವರು ನಮಗೆ ದಾರಿ ತೋರಿಸಬೇಕೆಂದು ಅಜ್ಜಪ್ಪ ಕಾಗಿನೆಲ್ಲಿ, ಶಿವಪ್ಪ ಕಾಗಿನೆಲ್ಲಿ, ಬಸವರಾಜ ಬೆನ್ನೂರ ತಮ್ಮ ಅಳಲು ತೋಡಿಕೊಂಡರು.

ಕಾಂಚನ ಸೀಡ್ಸ್ ಕಂಪೆನಿಯ ಅಧಿಕಾರಿ ಶ್ರಿನಿವಾಸ, ಕೃಷಿ ಅಧಿಕಾರಿ ನಾಗರತ್ನಾ ಕೆ.ಇನ್ನೂಳಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.