ADVERTISEMENT

ಕರುಣಾಮಯಿಯ ಜನ್ಮದಿನದ ಸಂಭ್ರಮ

ಕ್ರಿಸ್‌ಮಸ್: ಕಳೆಗಟ್ಟುತ್ತಿದೆ ಹಬ್ಬದ ಸಡಗರ; ಆರಾಧನೆ, ಆಚರಣೆಗೆ ನಗರದಲ್ಲಿ ಸಕಲ ಸಜ್ಜು

ಪಿ.ಆರ್‌.ಹರ್ಷವರ್ಧನ
Published 24 ಡಿಸೆಂಬರ್ 2016, 6:17 IST
Last Updated 24 ಡಿಸೆಂಬರ್ 2016, 6:17 IST
ಹಾವೇರಿ: ದಯೆ, ಕರುಣೆಯಿಂದ ಜನಮಾನಸದಲ್ಲಿ ನೆಲೆಸಿದ ಏಸು ಕ್ರಿಸ್ತರ ಜನ್ಮದಿನವೇ (ಡಿ.25) ‘ಕ್ರಿಸ್‌ಮಸ್’ ಶಿಲುಬೆಗೇರಿಸಿದ ಸಂದರ್ಭದಲ್ಲೂ ಸಿಟ್ಟಾಗದ ಕರುಣಾಮಯಿಯ ಹುಟ್ಟಿದ ದಿನವನ್ನು ಕೇವಲ ಕ್ರೈಸ್ತ ಅನುಯಾ ಯಿಗಳು ಮಾತ್ರವಲ್ಲ, ವಿವಿಧ ಪಂಗಡಗಳ ಜನತೆ ಸಡಗರದಿಂದ ಆಚರಿಸುತ್ತಾರೆ. 
 
‘ತಂದೆಯೇ ಅವರನ್ನು ಕ್ಷಮಿಸಿ ಬಿಡು. ಅವರು ಏನು ಮಾಡುತ್ತಿದ್ದಾರೆ ಎಂಬು ದನ್ನು ಅವರೇ ಅರಿಯರು’  ಎಂದು ಶಿಲುಬೆಗೇರಿಸಲಾದ ಕೊನೆ ಕ್ಷಣದಲ್ಲೂ ತಮ್ಮನ್ನು ವಿರೋಧಿಸಿದವರ ಕ್ಷಮೆಗೆ ಪ್ರಾರ್ಥಿಸಿದ ಏಸುಕ್ರಿಸ್ತರ ಜನ್ಮದಿನದಲ್ಲಿ ಕೇವಲ ಕ್ರೈಸ್ತರು ಮಾತ್ರವಲ್ಲ, ಸರ್ವ ಧರ್ಮೀಯರೂ ಪಾಲ್ಗೊಳ್ಳುವುದು ವಿಶೇಷ. ಹಾವೇರಿಯ ಸೈಂಟ್‌ ಆ್ಯನ್ಸ್‌, ದೇವಧರ, ಮೆಥೋಡಿಸ್ಟ್ ಮತ್ತಿತರ ಚರ್ಚ್‌ಗಳಲ್ಲಿ ಹಾಗೂ ಕ್ರೈಸ್ತರ ಮನೆ ಮನೆಗಳಲ್ಲಿ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ. 
 
ಸಿಂಗಾರ: ಕ್ರಿಸ್‌ಮಸ್ ಆಚರಣೆಯ ಹಿನ್ನೆಲೆಯಲ್ಲಿ ಮನೆಗಳ ಮುಂದೆ ಗೋದಲಿ (ಕುರಿಗಳ ಹಟ್ಟಿ)ಯ ಮಾದರಿ ಯನ್ನು ಮಾಡುತ್ತಾರೆ. ಗೋದಲಿ ಮುಂದೆ ಕ್ರಿಸ್‌ಮಸ್‌ ಮರವನ್ನು ನೆಟ್ಟು ವಿದ್ಯುತ್ ದೀಪಗಳಿಂದ ಅಲಂಕರಿ ಸುತ್ತಾರೆ. ಸುತ್ತ ಕ್ಯಾಂಡಲ್‌ ದೀಪಗಳನ್ನು ಬೆಳಗುತ್ತಾರೆ. ಗೋದಲಿಯಲ್ಲಿ ಕುರಿಮರಿ ಯ ಸಣ್ಣ ಸಣ್ಣ ಮೂರ್ತಿಗಳನ್ನು ಇಡು ತ್ತಾರೆ. ಅಲ್ಲದೇ, ದನಕರುಗಳ ಪ್ರತಿಮೆ ಇಡುತ್ತಾರೆ. ಸುತ್ತ ನಕ್ಷತ್ರ ಹಾಗೂ ನೇತಾಡುವ ಆಕಾಶಬುಟ್ಟಿಗಳು ಕಣ್ಮನ ಸೆಳೆಯುತ್ತವೆ. ಇವುಗಳನ್ನು ಬಣ್ಣ ಬಣ್ಣದ ಬೆಳಕಿನಿಂದ ಅಲಂಕರಿಸಲಾಗುತ್ತದೆ. ಆ ಗೋದಲಿಯಲ್ಲಿ  ಮೇರಿಯಮ್ಮನ ಪ್ರತಿಮೆ ಇಡುತ್ತಾರೆ. 
 
ಗೋದಲಿ–ಜನನ: ಡಿ.24ರ ಮಧ್ಯರಾತ್ರಿ 12 ಗಂಟೆ ಕಳೆದು ಡಿ.25ರ ಬರುವಿಕೆ ಯಲ್ಲಿ ‘ಕ್ರಿಸ್‌ಮಸ್‌’ ಆಚರಿಸಲಾಗುತ್ತದೆ. ಆಗ ಗೋದಲಿಯಲ್ಲಿನ ಮರಿಯಮ್ಮನ ಮಡಿಲಲ್ಲಿ ಬಾಲಏಸುವಿನ ಪ್ರತಿಮೆ ಇಡುತ್ತಾರೆ. ಮಗುವಿನ ಮುಗುಳ್ನಗೆ ಯಲ್ಲೂ ಕ್ಷಮೆ, ಪ್ರೀತಿ, ಸಾಮರಸ್ಯದ ಸಂದೇಶವು ಸಾರುವಂತೆ ಮಾಡುತ್ತಾರೆ. ದೇವರ ಸ್ತುತಿ, ಜೋಗುಳ ಮೂಲಕ ಆರಾಧಿಸುತ್ತಾರೆ. ಮೇಣದಬತ್ತಿ ಬೆಳಗು ತ್ತಾರೆ. ಹೂವು, ಸುಗಂಧ ಅರ್ಪಿಸುತ್ತಾರೆ. ಇದಕ್ಕೂ ಮೊದಲು (ಡಿ.24) ಸಂಜೆ ಯಿಂದಲೇ ಚರ್ಚ್‌ಗಳಲ್ಲಿ ಧರ್ಮಗುರು ಗಳ (ಫಾದರ್‌) ನೇತೃತ್ವದಲ್ಲಿ ಆರಾಧನೆ ಗಳು ಆರಂಭಗೊಂಡಿರುತ್ತವೆ. 
 
‘ದೇವವಾಣಿ ನುಡಿದಂತೆ ನಿಮ್ಮ ಉದರದಲ್ಲಿ ದೇವಮಾನವ ಜನಿಸಲಿ ದ್ದಾನೆ’ ಎಂಬ ಏಂಜೆಲ್‌ ಗ್ಯಾಬ್ರಿಯಲ್‌ ಸಂದೇಶದ ಪಾಲನೆಯನ್ನು ಮಾಡಿದ ಮೇರಿಯಮ್ಮ, ಬಾಲಏಸುವಿಗೆ ಜನ್ಮ ನೀಡುತ್ತಾಳೆ ಎಂಬ ನಂಬಿಕೆಯ ಗಳಿಗೆಯನ್ನು ಭಕ್ತಿ, ಶ್ರದ್ಧೆ, ಸಡಗರದಿಂದ ಆಚರಿಸುತ್ತಾರೆ.  
 
‘ಕ್ರಿಸ್‌ಮಸ್‌ಗೂ ಮೊದಲು ಒಂಬತ್ತು ದಿನ (ಡಿ.16ರಿಂದ24ರ ತನಕ ) ಮಾತೆ ಮೇರಿಯಮ್ಮ ಅವರನ್ನು ಪ್ರಾರ್ಥಿಸುವ ‘ನೊವೆನಾ’ ನಡೆಯುತ್ತದೆ. ಆಗ ಕೆಲವರು ಉಪವಾಸ, ದಾನ ಧರ್ಮ ಮಾಡುತ್ತಾರೆ. ಆ ಒಂಬತ್ತು ದಿನಗಳೂ ಚರ್ಚ್‌, ಮನೆಗಳಲ್ಲಿ ಆರಾಧನೆ ನಡೆಯುತ್ತವೆ. ಇದಕ್ಕೂ ಹಿಂದಿನ ನವೆಂಬರ್ ತಿಂಗಳನ್ನು ‘ಹಿರಿಯರ ತಿಂಗಳು’ ಎಂದು ಆಚರಿಸ ಲಾಗುತ್ತದೆ’  ಎನ್ನುತ್ತಾರೆ ಹಾವೇರಿಯ ಸೇಂಟ್‌ ಆನ್ಸ್‌ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್‌ ಶೆರ್ಲಿನ್‌ ಥಾಮಸ್‌. 
 
ಮಕ್ಕಳ ಸಂಭ್ರಮ: 4ನೇ ಶತಮಾನದಲ್ಲಿ ಟರ್ಕಿಯಲ್ಲಿದ್ದ ಬಿಷಪ್‌ ಸಂತ ನಿಕೋಲಸ್‌ ದಾನಿಯಾಗಿದ್ದರು. ಅವರ ನೆನಪಿನಲ್ಲಿ  ಕ್ರಿಸ್‌ಮಸ್‌ ಸಂದರ್ಭದಲ್ಲಿ ಸಂತಕ್ಲಾಸಾ ಬರುತ್ತಾರೆ. ಕೆಂಪು ಬಟ್ಟೆ, ಟೊಪ್ಪಿ ಧರಿಸಿ, ಗಡ್ಡ ಇಟ್ಟುಕೊಂಡ ಸಂತ ಕ್ಲಾಸಾ ಮಕ್ಕಳಿಗೆ ಸಂಭ್ರಮವನ್ನು ಉಂಟು ಮಾಡುತ್ತಾರೆ. ಸಂತಕ್ಲಾಸ್‌ ವೇಷಧಾರಿಯ ಜೊತೆ ಕ್ರಿಸ್‌ಮಸ್‌ ಹಿಂದಿನ ದಿನ ಬಂಧುಗಳ ಮನೆ ಮನೆಗೆ ಹೋಗಿ ಹಾಡಿಬರುತ್ತಾರೆ.   
 
ಆಚರಣೆ: ಕ್ರಿಸ್‌ಮಸ್‌ ದಿನ ಬೆಳಿಗ್ಗೆ ಹೊಸ ಬಟ್ಟೆ ತೊಟ್ಟು ಚರ್ಚ್‌ಗಳಿಗೆ ಬಂದು ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ. ನಂತರ ಪರಸ್ಪರ ಕ್ರಿಸ್‌ಮಸ್ ಶುಭಾಷಯ ವಿನಿಮಯ ಮಾಡಿಕೊಳ್ಳುತ್ತಾರೆ. ಸಿಹಿ ತಿಂಡಿಗಳನ್ನು, ಕೇಕ್‌ಗಳನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ.  ಪ್ರಾರ್ಥನೆ ಮಾಡುತ್ತಾರೆ. ಉಡುಗೊರೆ, ದಾನಗಳನ್ನು ನೀಡುತ್ತಾರೆ. 
 
ಸಿದ್ಧತೆ: ಹಬ್ಬಕ್ಕೆ ಹೊಸ ಬಟ್ಟೆಗಳ ಖರೀ, ತರತರಹದ ಸಿಹಿ–ಖಾರ ತಿನಿಸುಗಳು, ಹಾಡುಗಳು (ಕ್ಯಾರಲ್ ಸಿಂಗಿಂಗ್ ) ಮತ್ತಿತರ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ಮನೆಗಳಲ್ಲಿ ಕೇಕ್‌, ಸಿಹಿ ತಿಂಡಿ ತಯಾರು ಮಾಡುತ್ತಾರೆ. ಅಲ್ಲದೇ ಕೋಳಿ, ಕುರಿ, ಮೀನಿನ ವಿಶೇಷ ಖಾದ್ಯಗಳು ಇರುತ್ತವೆ. 
 
ಜಿಲ್ಲೆಯ ಸುಮಾರು 40 ಕಡೆಗಳಲ್ಲಿ ಪ್ರೊಟೆಸ್ಟೆಂಟ್‌, ಹಾವೇರಿ, ಗುತ್ತಲ, ರಾಣೆಬೆನ್ನೂರು ವಿವಿಧೆಡೆ ಕ್ಯಾಥೋಲಿಕ್‌, ಹಾನಗಲ್‌ ಮತ್ತಿತರಡೆಗಳಲ್ಲಿ ಮೆಥೋ ಡಿಸ್ಟ್ ಪಂಥಗಳ ಚರ್ಚ್‌ಗಳಲ್ಲಿ ಆಚರಿಸ ಲಾಗುತ್ತದೆ. 
 
ಕ್ರೈಸ್ತ ಅನುಯಾಯಿಗಳ ಪೈಕಿ ರೋಮನ್‌ ಕ್ಯಾಥೊಲಿಕ್‌, ಪ್ರೊಟೆಸ್ಟೆಂಟ್‌, ಮೆಥೋಡಿಸ್ಟ್‌, ಯಹೋವನನ ಸಾಕ್ಷಿ ಗಳು, ನ್ಯೂ ಲೈಫ್‌ ಮತ್ತಿತರ ಪಂಥಗಳಿವೆ. ನಂಬಿಕೆ, ಆರಾಧನೆಯಲ್ಲಿ ವಿಭಿನ್ನತೆ ಇದ್ದರೂ, ಎಲ್ಲರೂ ‘ಕ್ರಿಸ್‌ಮಸ್‌’ ಆಚರಿ ಸುತ್ತಾರೆ. ಸರ್ವರಿಗೂ ಒಳಿತಾಗಲಿ ಎಂದು ಹಾರೈಸುವ ಈ ಹಬ್ಬವನ್ನು ಸಾಮರಸ್ಯದಿಂದ ಆಚರಿಸಲಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.