ADVERTISEMENT

ಕಾನೂನು ಚೌಕಟ್ಟಿನಲ್ಲಿ ಭವಿಷ್ಯ ರೂಪಿಸಿ: ಕೂಡ್ಲಿಗಿಮಠ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:27 IST
Last Updated 19 ಜುಲೈ 2013, 6:27 IST

ಶಿಗ್ಗಾವಿ: ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಣ ಅವಶ್ಯವಾಗಿದೆ. ಕೆಲವು ವಿದ್ಯಾರ್ಥಿಗಳು ಬೆಳೆಯುವ ಹಂತದಲ್ಲಿ ದುಶ್ಚಟಗಳಿಗೆ ಅಂಟಿಕೊಂಡು ಜೀವನ ಹಾಳು ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಅಸಿಸ್ಟಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಜಿ. ಕೂಡ್ಲಿಗಿಮಠ ಹೇಳಿದರು.

ಪಟ್ಟಣದ ಮಾಮಲೆದೇಸಾಯಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ಕಾನೂನು ಅರಿವು ನೆರವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ರ‌್ಯಾಗಿಂಗ್‌ದಿಂದ ದೂರವಿದ್ದು, ಉತ್ತಮ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕು ಎಂದು ಅವರಿಗೆ ಕಿವಿಮಾತು ಹೇಳಿದರು.
ಶಿಗ್ಗಾವಿ ಪೊಲೀಸ್ ಠಾಣೆ ಡಿವೈಎಸ್‌ಪಿ  ಬಿ.ವೈ. ಬೆಳ್ಳುಬ್ಬಿ ಮಾತನಾಡಿ, ರ‌್ಯಾಗಿಂಗ್ ನಡೆದಲ್ಲಿ ಭಯಭೀತರಾಗದೇ ಕಾಲೇಜಿನ ಪ್ರಾಚಾರ್ಯರು ಅಥವಾ ಪೊಲೀಸರಿಗೆ ಮಾಹಿತಿ ನೀಡಿದರೆ ತಕ್ಷಣ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಜೊತೆಗೆ ಇತರರಿಗೆ ಆಗುವ ತೊಂದರೆ ತಪ್ಪಿಸಬಹುದು ಎಂದರು.

ಸಾರ್ವಜನಿಕ ಆಸ್ಪತ್ರೆ ಚಿಕ್ಕಮಕ್ಕಳ ತಜ್ಞ ಡಾ.ಮಹೇಶ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾದಕ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಹಾಗೂ ಲೈಂಗಿಕತೆ ಕುರಿತು ಉಪನ್ಯಾಸ ನೀಡಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಕೆ.ಅಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಜನತಾ ಶಿಕ್ಷಣ ಕಾರ್ಯದರ್ಶಿ ಶಂಕರಗೌಡ್ರ ಪಾಟೀಲ, ಜೆ.ಎ.ಹಿರೇಮಠ, ಕೆ.ಎನ್. ಭಾರತಿ, ಸಿ.ಎನ್.ಬಡ್ಡಿ, ನ್ಯಾಯಾಲಯದ ಸಿಬ್ಬಂದಿ ಎಚ್.ವೈ. ಮುಳಗುಂದ, ಅಜ್ಜಪ್ಪ ವಡ್ಡರ ಉಪಸ್ಥಿತರಿದ್ದರು. ಪ್ರಾಚಾರ್ಯ ಜಿ.ಎನ್.ಯಲಿಗಾರ ಸ್ವಾಗತಿಸಿದರು. ಕೆ.ಬಿ.ಚನ್ನಪ್ಪ ನಿರೂಪಿಸಿದರು. ರಮಾಕಾಂತ ಭಟ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.