ADVERTISEMENT

ಕಾರ್ಯ ಸ್ಥಗಿತ ಭೀತಿಯಲ್ಲಿ ಕ್ರೀಡಾಂಗಣ!

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 6:16 IST
Last Updated 3 ಜುಲೈ 2013, 6:16 IST

ಹಾವೇರಿ: ಜಿಲ್ಲಾ ಕ್ರೀಡಾಂಗಣದಲ್ಲಿ ಇರುವ ಈಜುಗೊಳ, ಬ್ಯಾಡ್ಮಿಂಟನ್ ಕೋಟ್‌ನ ಒಳಾಂಗಣ ಕ್ರೀಡಾಂಗಣ, ಮಲ್ಟಿಜಿಮ್ ಶೀಘ್ರದಲ್ಲಿಯೇ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸುವ ಭೀತಿಯಲ್ಲಿದ್ದರೆ, ಕ್ರೀಡಾ ವಸತಿ ಶಾಲೆಗೆ ಕತ್ತಲು ಆವರಿಸುವ ಭೀತಿಯಲ್ಲಿದೆ.

ಹೌದು, ಜಿಲ್ಲಾ ಯುವಜನ ಮತ್ತು ಸೇವಾ ಇಲಾಖೆ ಕಳೆದ ಎಂಟು ತಿಂಗಳಿನಿಂದ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದೇ ಇದಕ್ಕೆ ಕಾರಣ. 3.80 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇರುವುದರಿಂದ ಆರು ದಿನಗಳ ಹಿಂದೆಯೇ ಹೆಸ್ಕಾಂ ಕ್ರೀಡಾಂಗಣದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ.

ಈಜುಗೊಳದ ನೀರಿನ ಬದಲಾವಣೆಗೆ, ಒಳಾಂಗಣ ಕ್ರೀಡಾಂಗಣ ಹಾಗೂ ಮಲ್ಟಿಜಿಮ್‌ಗಳಲ್ಲಿ ಬೆಳಕಿಗೆ ವಿದ್ಯುತ್ ಸಂಪರ್ಕದ ಅಗತ್ಯವಾಗಿದೆ. ಈಗ ಅದು ಇಲ್ಲದೇ ಅನಿವಾರ್ಯವಾಗಿ ಜನರೇಟರ್ ಮೇಲೆ ನಡೆಸಲಾಗುತ್ತಿದೆ. ಕ್ರೀಡಾಪಟುಗಳು ಪ್ರತಿದಿನ ನಾಲ್ಕಾರು ಗಂಟೆಗಳ ಕಾಲ ಬಳಕೆ ಮಾಡುವ ಇವುಗಳನ್ನು ಈಗ ದಿನವೊಂದಕ್ಕೆ ಕೇವಲ ಎರಡು ಗಂಟೆ ಅವಧಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಜನರೇಟರ್‌ನಿಂದ ವಿದ್ಯುತ್ ಸೌಲಭ್ಯ ಪಡೆಯುವ ಇಲಾಖೆ ನಿರಂತರ ವಿದ್ಯುತ್ ಬೇಕಾಗುವ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಗ್ಗೆ 6.30ರಿಂದ 7.30 ಹಾಗೂ ಸಂಜೆ 6.30ರಿಂದ 7.30ವರೆಗೆ ಆಟ ಆಡಲು ವ್ಯವಸ್ಥೆ ಕಲ್ಪಿಸಿರುವ ಸೂಚನೆಯನ್ನು ಇಲಾಖೆ ಹೊರಡಿಸಿದೆ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿರುವ ಕ್ರೀಡಾಂಗಳ ನಿರ್ವಹಣೆಗೆ ಬೇಕಾದ ಅನುದಾನವನ್ನು ತರಿಸುವಲ್ಲಿ ಹಾಗೂ ಜಿಲ್ಲಾ ಕ್ರೀಡಾಂಗಣವನ್ನು ನಿರ್ವಹಣೆ ಮಾಡುವಲ್ಲಿ ಇಲಾಖೆ ವಿಫಲವಾಗಿರುವುದು ಈ ಸಮಸ್ಯೆ ಎದುರಾಗಲು ಕಾರಣವಾಗಿದೆ. ಇಲಾಖೆಯ ತಪ್ಪಿಗೆ ಕ್ರೀಡಾಪಟುಗಳು ತೊಂದರೆ ಅನುಭವಿಸಬೇಕಾಗಿದೆ ಎನ್ನುತ್ತಾರೆ ಕ್ರೀಡಾಪಟುಗಳು.

ಡಿಸೇಲ್ ಜನರೇಟರ್ ಬಳಸಿ ವಿದ್ಯುತ್ ಸಂರ್ಪಕ ಪಡೆಯುವುದು ವಿದ್ಯುತ್‌ಗಿಂತ ಐದಾರು ಪಟ್ಟು ದುಬಾರಿಯಾಗಿದೆ. ವಿದ್ಯುತ್ ಸಂಪರ್ಕದ ನೆಪವೊಡ್ಡಿ ಕ್ರೀಡಾಂಗಣಗಳಲ್ಲಿ ಆಡವಾಡಲಿಕ್ಕೆ ಅವಕಾಶ ನಿರಾಕರಿಸಬಹುದು. ಆದರೆ, ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾಶಾಲೆಗಳಿಗೆ ಬೀಗ ಹಾಕಿದರೆ ಕ್ರೀಡಾಪಟುಗಳಿಗೆ ತೀವ್ರ ತೊಂದರೆಯಾಗಲಿದೆ. ಅದೊಂದೆ ಕಾರಣಕ್ಕಾಗಿ ಇಲಾಖೆ ಹೆಚ್ಚಿನ ವ್ಯಯಿಸಿ ಜನರೇಟರ್ ಮೂಲಕ ವಿದ್ಯುತ್ ಪಡೆದು ಕ್ರೀಡಾ ಚಟುವಟಿಕೆಗಳು ನಡೆಯುವಂತೆ ನೋಡಿಕೊಂಡಿದೆ ಎನ್ನುತ್ತಾರೆ ಕ್ರೀಡಾಪಟುಗಳು.

ಜನರೇಟರ್ ಮೇಲೆಯೇ ಬಹಳಷ್ಟು ದಿನ ನಡೆಸಲು ಸಾಧ್ಯವಾಗುವುದಿಲ್ಲ. 10-15 ದಿನಗಳಲ್ಲಿ ಇಲಾಖೆಗೆ ಅಗತ್ಯ ಅನುದಾನ ಬಾರದಿದ್ದಲ್ಲೆ. ಜನರೇಟರ್ ಸಂಪರ್ಕವನ್ನು ಸ್ಥಗಿತಗೊಳಿಸಿ ಈಜುಗೊಳ, ಮಲ್ಟಿಜಿಮ್ ಮತ್ತು ಒಳಾಂಗಣ ಕ್ರೀಡಾಂಗಣಕ್ಕೆ ಬೀಗ ಹಾಕಿ ಎಲ್ಲ ಕ್ರೀಡಾಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಾರೆ ಹೆಸರು ಹೇಳಲಿಚ್ಚಸದ ಅರೆಕಾಲಿಕ ತರಬೇತುದಾರರು.

ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ: ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ವಾರದಿಂದ ವಿದ್ಯುತ್ ಸಂಪರ್ಕ ಇಲ್ಲವೆಂದರೂ ಅನುದಾನ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸುವ ಕ್ರೀಡಾಪುಟಗಳು, ಕೂಡಲೇ ಸ್ಪಂದಿಸಿ ಇಲಾಖೆಗೆ ತಕ್ಷಣ ಅನುದಾನ ಬಿಡುಗಡೆ ಮಾಡಿ ಕ್ರೀಡಾಂಗಣಕ್ಕೆ ಬೀಗ ಹಾಕುವ ಪರಿಸ್ಥಿತಿಯಿಂದ ಪಾರು ಮಾಡಬೇಕು ಎಂದು ಒತ್ತಾಯಿಸುತ್ತಾರೆ.

ಅನುದಾನದ ಕೊರತೆ: ಜಿಲ್ಲಾ ಕ್ರೀಡಾಂಗಣದ ವಿದ್ಯುತ್ ಬಿಲ್ ಬಾಕಿ ಉಳಿಯಲು ಅನುದಾನ ಇಲ್ಲದಿರುವುದೇ ಪ್ರಮುಖ ಕಾರಣ. ಈಜುಗೊಳವೊಂದರಿಂದ ತಿಂಗಳಿಗೆ 12 ಸಾವಿರ ರೂಪಾಯಿ ಆದಾಯ ಬರುತ್ತದೆ. ಆದರೆ, ಅದಕ್ಕೆ ನಾವು 50 ಸಾವಿರ ರೂಪಾಯಿ ಖರ್ಚು ಮಾಡುತ್ತೇವೆ. ಇದೇ ಪರಿಸ್ಥಿತಿ ಎಲ್ಲ ಕ್ರೀಡಾಂಗಣಗಳಲ್ಲಿದೆ ಎಂದು ಜಿಲ್ಲಾ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮುತ್ತು ಕಾಮಾಚ್ಚಿ ಹೇಳುತ್ತಾರೆ.

ಹೆಚ್ಚುವರಿ ಅನುದಾನ ನೀಡುವಂತೆ ಕೋರಿ ಆರ್ಥಿಕ ಇಲಾಖೆ ಪತ್ರ ಬರೆಯಲಾಗಿದೆ. ತ್ರೈಮಾಸಿಕ ಅನುದಾನದಡಿ ಸಿಗಬೇಕಾದ ಅನುದಾನ ಕೂಡಾ ತಾಂತ್ರಿಕ ಕಾರಣದಿಂದ ದೊರೆತಿಲ್ಲ. ಒಂದು ವಾರದಲ್ಲಿ ಆ ತಾಂತ್ರಿಕ ಸಮಸ್ಯೆ ನಿವಾರಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರದಿಂದ ಇಲ್ಲವೇ ಜಿಲ್ಲಾಡಳಿತದಿಂದ ಅನುದಾನ ಬಂದ ಮೇಲೆ ಬಿಲ್ ಪಾವತಿಸಲಾಗುವುದು ಎಂದು ಅವರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.