ADVERTISEMENT

ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆಗೆ ವಿರೋಧ

ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಕರವೇ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 9:02 IST
Last Updated 12 ಏಪ್ರಿಲ್ 2018, 9:02 IST

ಹಾವೇರಿ: ಕಾವೇರಿ ನದಿ ನಿರ್ವಹಣಾ ಮಂಡಳಿ ರಚಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಜಿಲ್ಲಾ ಘಟಕದ ಅಧ್ಯಕ್ಷ ರಾಮು ತಳವಾರ ಮಾತನಾಡಿ, ಕಾವೇರಿ ನದಿಗೆ ಮತ್ತೊಂದು ಸಂಕಷ್ಟ ಬಂದೊದಗಿದೆ. ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಜನತೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಿವೆ. ಮಂಡಳಿ ರಚನೆಯಾದರೆ, ಅದು ಆದೇಶ ಮಾಡಿದ ಸಂದರ್ಭದಲ್ಲೆಲ್ಲಲ್ಲಾ ಕರ್ನಾಟಕವು ತಮಿಳುನಾಡಿಗೆ ನೀರು ಹರಿಸಬೇಕಾಗುತ್ತದೆ. ಇದರಿಂದ ರಾಜ್ಯದಲ್ಲಿ ಕಾವೇರಿ ನದಿ ನೀರನ್ನು ಕುಡಿಯಲು ಹಾಗೂ ಕೃಷಿಗೆ ಅವಲಂಬಿಸಿದ ಜನತೆಗೆ ಅನ್ಯಾಯವಾಗುತ್ತದೆ ಎಂದು ದೂರಿದರು.

ಮಂಡಳಿ ರಚನೆಯು ಅವೈಜ್ಞಾನಿಕ ಕ್ರಮವಾಗಿದ್ದು, ತಮಿಳುನಾಡು ಹಿತಾಸಕ್ತಿಗೆ ಅನುಗುಣವಾಗಿದೆ. ಇದೊಂದು ಏಕಪಕ್ಷೀಯ ತೀರ್ಮಾನವಾಗಿದ್ದು, ಕರ್ನಾಟಕದ ಹಿತಾಸಕ್ತಿಯನ್ನು ಮಣ್ಣುಪಾಲಾಗಿಸುತ್ತದೆ ಎಂದರು.

ADVERTISEMENT

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅತಾವುಲ್ಲಾ ಖಾನ್ ಬಕ್ಷಿ ಮಾತನಾಡಿ, ಮಂಡಳಿ ರಚನೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ಕೇಂದ್ರ ಸರ್ಕಾರವು ರಾಜ್ಯದ ರೈತರ ಹಾಗೂ ಜನತೆಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದರು.

ವೇದಿಕೆಯ ಬಸವರಾಜ ವರ್ದಿ, ಪ್ರಕಾಶ ಕಲ್ಮನಿ, ಕೆ.ಬಿ. ತಿಮ್ಮಾಪುರ, ಮಂಜುನಾಥ ಉಪ್ಪಾರ, ಜಹೀರ್ ಪಲಟನಿ, ಅಜೀಮ್ ಭಾಷಾ ಮಾಸನಕಟ್ಟಿ, ಅಬ್ದುಲ್‌ ಶಾಹಿದ್ ಚೂಡಿಗಾರ, ಕರಬಸಪ್ಪ ಸೋಮಾಪುರ, ಚಂದ್ರಗೌಡ ಗಡಿಯಪ್ಪಗೌಡ್ರ, ಭಾರತಿ ಹಂಗನಕಟ್ಟಿ, ಲಕ್ಷ್ಮಣ ಕಂಡೂನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.