ADVERTISEMENT

ಘನತ್ಯಾಜ್ಯ ವಿಲೇವಾರಿ: ಜನರಿಗೆ ನಿತ್ಯ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 11:24 IST
Last Updated 3 ಜೂನ್ 2013, 11:24 IST

ರಾಣೆಬೆನ್ನೂರು: ಏಷ್ಯಾ ಖಂಡದಲ್ಲಿಯೇ ಬಿತ್ತನೆ ಬೀಜ ಉತ್ಪಾದನೆಗೆ ಹೆಸರುವಾಸಿಯಾಗಿರುವ ರಾಣೆಬೆನ್ನೂರು ವಾಣಿಜ್ಯ ನಗರಿ ಎಂದು ಪ್ರಖ್ಯಾತಿ ಪಡೆದಿದ್ದರೂ, ನಗರ ಇಂದು ಘನ ತ್ಯಾಜ್ಯ ವಸ್ತುಗಳಿಂದ ಗಬ್ಬು ನಾರುತ್ತಿದೆ. ನಗರದ ತುಂಬೆಲ್ಲ ಎಲ್ಲಿ ಬೇಕೆಂದಲ್ಲಿ ಹಾಕಲಾಗಿರುವ ಕಸದ ರಾಶಿಗಳಿಂದ ಜನತೆ ಬೇಸತ್ತಿದ್ದಾರೆ.

ನಗರ ಪ್ರವೇಶವಾಗುತ್ತಿದ್ದಂತೆ ಮೊದಲು ಕಣ್ಣಿಗೆ ಬೀಳುವುದು ಕಸದ ಗುಡ್ಡೆಗಳು, ಎಲ್ಲೆಂದರಲ್ಲಿ ಹಾಕಲಾದ ಕಾಂಕ್ರಿಟ್ ಕಲ್ಲು ಮಣ್ಣಿನ ಗುಡ್ಡೆಗಳು, ಮದ್ಯದ ಬಾಟಲಿಗಳ ಗುಡ್ಡೆಗಳು ಸ್ವಾಗತಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಕಪಕ್ಕದಲ್ಲಿ ಸುಮಾರು ಒಂದು ಕಿ.ಮೀ ಉದ್ದಕ್ಕೂ ಇಂತಹ ಕಸದ ಗುಡ್ಡೆಗಳದ್ದೆ ಕಾರುಬಾರು.

ಇದಕ್ಕೆಲ್ಲಾ ಕಾರಣ ಘನತ್ಯಾಜ್ಯ ವಿಲೇವಾರಿಯಲ್ಲಿ ಸ್ಥಳೀಯ ನಗರಸಭೆ ವಿಫಲವಾಗಿದೆ ಎಂಬುದು ಸಾರ್ವಜನಿಕರ ಆರೋಪ. ನಗರದ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಆಯ್ಕೆ ಮಾಡಿ ಅದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಿದ್ದರೆ ಸಾರ್ವಜನಿಕರು ಈ ರೀತಿ ಹೆದ್ದಾರಿ ಅಕ್ಕಪಕ್ಕದಲ್ಲಿ ಕಸ ವಿಲೇವಾರಿ ಮಾಡುವ ಅನಿವಾರ್ಯತೆ ಬರುತ್ತಿರಲಿಲ್ಲ ಎಂದು ಹೇಳುತ್ತಾರೆ ನಗರದ ನಿವಾಸಿಗಳು.

ಇಲ್ಲಿನ ಶ್ರೀರಾಮನಗರ, ಮೃತ್ಯುಂಜಯ ನಗರ, ನೇಕಾರನಗರ, ಕೈಗಾರಿಕಾ ಪ್ರದೇಶ, ಸಿದ್ಧಾರೂಢ ನಗರ, ಉಮಾಶಂಕರ ನಗರ ಸೇರಿದಂತೆ ಇಲ್ಲಿನ ಹಲವು ಪ್ರದೇಶಗಳಲ್ಲಿನ ಘನ ತ್ಯಾಜ್ಯವನ್ನೆಲ್ಲಾ ಹೆದ್ದಾರಿ ಬದಿಗೆ ಹಾಕುವುದರಿಂದ ಇಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. 

ನಗರದ ಬಿ.ಟಿ.ಪಾಟೀಲ ಮೈದಾನದಲ್ಲಿ ಇದೇ ಪರಿಸ್ಥಿತಿ. ಮೈದಾನದ ಸುತ್ತಮುತ್ತಲಿನ ನಿವಾಸಿಗಳು ಈ ಮೈದಾನದಲ್ಲಿ ಕಸ ತಂದು ಹಾಕುವುದರಿಂದ ಹಾಗೂ ಇಲ್ಲಿ ಹಾಕಿದ ಕಸವನ್ನು ನಗರಸಭೆ ಸಮರ್ಪಕವಾಗಿ ವಿಲೇವಾರಿ ಮಾಡದಿರುವ ಕಾರಣ ಈ ಮೈದಾನ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಅಲ್ಲದೆ ಈ ಮೈದಾನದಲ್ಲಿ ನಡೆಯುವ ಸಭೆ ಸಮಾರಂಭಗಳ ನಂತರ ಇಲ್ಲಿ ಬೀಳುವ ಕಸವನ್ನು ವಿಲೇವಾರಿ ಮಾಡುವ ಗೋಜಿಗೆ ಸ್ಥಳೀಯ ಆಡಳಿತ ಮುಂದಾಗಿಲ್ಲ. ಈ ಇದರಿಂದಾಗಿ ಇಡೀ ಮೈದಾನವೆಲ್ಲ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯದಿಂದ ಕೂಡಿದ್ದು, ಇಲ್ಲಿ ಓಡಾಡುವ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತಿದೆ.

ನಗರದ ಹೊರವಲಯದ ಹುಲ್ಲತ್ತಿ ಗ್ರಾಮದ ಸಮೀಪ ನಗರಸಭೆ ಘನ ತ್ಯಾಜ್ಯ ವಿಲೇವಾರಿಗಾಗಿ ಜಮೀನು ಖರೀದಿಸಿ ವ್ಯವಸ್ಥೆಗೊಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಗರ ದಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ಸಮರ್ಪಕವಾಗಿ ಘಟಕಕ್ಕೆ ವಿಲೇವಾರಿ ಮಾಡದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಹೇಳಲಾಗುತ್ತಿದೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.