ADVERTISEMENT

ಜಮೀನಿಗಾಗಿ ಸ್ವಾತಂತ್ರಯೋಧ ರಾಮಚಂದ್ರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 6:23 IST
Last Updated 2 ಜುಲೈ 2013, 6:23 IST

ಶಿಗ್ಗಾವಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಜಮೀನು ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸ್ವಾತಂತ್ರ್ಯ ಯೋಧ ರಾಮಚಂದ್ರಪ್ಪ ಅರ್ಕಾಚಾರಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಪ್ಪು ಪಟ್ಟಿ ಧರಿಸಿ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ಹಿಂದೆ ಇದೇ ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದ ರಾಮಚಂದ್ರ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ ವಿನಾ ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದರು.

ಸ್ವಾತಂತ್ರ ಯೋಧರ ಯೋಜನೆಯಡಿ ಭೂ ಮಂಜೂರಾತಿಗಾಗಿ ಸುಮಾರು ವರ್ಷಗಳಿಂದ ಅಲೆದಾಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಲಿಖಿತವಾಗಿ ಹಾಗೂ ಮೌಖಿಕವಾಗಿ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳು ಇನ್ನೂ ಕಾಲಾವಕಾಶಬೇಕು ಎಂದು ಕಾಲಹರಣ ಮಾಡುತ್ತಿದ್ದಾರೆ. ತಮಗೆ ಸುಮಾರು 93ವರ್ಷವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದೇನೆ. ತಕ್ಷಣ ಮೇಲಾಧಿಕಾರಿಗಳು  ಬೇಡಿಕೆಗಳಿಗೆ ಸ್ಪಂದಿಸಿ ಬರಲಿರುವ ಆಗಸ್ಟ್ 15ರೊಳಗೆ ಭೂಮಿ ಮಂಜೂರಾತಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ ಚೌಗಲೆ, ಉಪವಿಭಾಗಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಡಿವೈಎಸ್‌ಪಿ ಬಿ. ವೈ. ಬೆಳ್ಳಿಬಿ, ಸಿಪಿಐ ಬಿ.ಬಿ.ಪಾಟೀಲ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಒಂದು ತಿಂಗಳದೊಳಗೆ ಭೂಮಿ ಮಂಜೂರಾತಿ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಕುಟುಂಬ ಸದಸ್ಯರಾದ ಶಂಕರ ಅರ್ಕಾಚಾರಿ, ಮಂಜುಳಾ ಅರ್ಕಾಚಾರಿ, ಆಶೋಕ ಬಡಿಗೇರ, ವಿಜಯಲಕ್ಷ್ಮೀ ಅರ್ಕಾಚಾರಿ,  ಮಧನಕುಮಾರ, ಮಂಜುನಾಥ ಕಮ್ಮಾರ, ರಾಘವೇಂದ್ರ ದೇಶಪಾಂಡೆ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.

ಪಂಚಮಸಾಲಿ  ಸಮಾಜದಿಂದ ಬೆಂಬಲ: ಸ್ವಾತಂತ್ರ ಯೋಧ ರಾಮಚಂದ್ರಪ್ಪ ಅರ್ಕಾಚಾರಿ ನಡೆಸುತ್ತಿರುವ ಪ್ರತಿಭಟನೆಗೆ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಣ್ಣಣ್ಣವರ, ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ ಅವರ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.