ADVERTISEMENT

ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಅವಾಂತರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 9:25 IST
Last Updated 22 ಫೆಬ್ರುವರಿ 2012, 9:25 IST

ಹಾವೇರಿ: ಜಿಲ್ಲೆಯಲ್ಲಿನ ಬರ ಹಾಗೂ ಬೇಸಿಗೆ ಸಂದರ್ಭದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಮರೆ ಮಾಚುವ ಮೂಲಕ ಸಭೆಗೆ ತಪ್ಪು ಮಾಹಿತಿ ನೀಡಿದ ಪ್ರಸಂಗ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಬೆಳಕಿಗೆ ಬಂದಿತು.

ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತ ಚರ್ಚೆ ನಡೆಸುವಾಗ ಜಿಲ್ಲೆಯಲ್ಲಿ ಯಾವುದೇ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಮುಂಜಾಗೃತ ಕ್ರಮವಾಗಿ ಬರ ಪರಿಹಾರಿ ನಿಧಿಯಿಂದ ಎಲ್ಲ ತಾಲ್ಲೂಕುಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಮೈಸೂರ ಅವರು ಸಭೆಗೆ ತಿಳಿಸಿದರು.

ಆಗ ಜಿ.ಪಂ.ಸದಸ್ಯರಾದ ಸಂತೋಷಕುಮಾರ ಪಾಟೀಲ, ಶಿವಕುಮಾರ ಮುದ್ದಪ್ಪಳವರ ಹಾಗೂ ಬಸನಗೌಡ  ಇನಾಮತಿ ಅವರು ಅಧಿಕಾರಿಗಳ ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ಜಿಲ್ಲೆಯ ನೀರಿನ ಸಮಸ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಎಷ್ಟು ಕುಡಿಯುವ ನೀರಿನ ಯೋಜನೆಗಳಿವೆ. ಕಾರ್ಯ ನಿರ್ವಹಿಸುವ ಯೋಜನೆಗಳೆಷ್ಟು? ಸಂಪೂರ್ಣ ಬಂದಾಗಿರುವವು ಹಾಗೂ ದುರಸ್ತಿಯಲ್ಲಿರುವವು ಎಷ್ಟು? ಎಂಬುದರ ಮಾಹಿತಿ ನೀಡದೇ ಎಲ್ಲವೂ ಸರಿಯಾಗಿದೆ ಎಂದರೆ ಏನು ಅರ್ಥ? ಎಂದರಲ್ಲದೇ, ಸಮರ್ಪಕ ಮಾಹಿತಿ ಇಲ್ಲದೇ ಸದಸ್ಯರು ಚರ್ಚೆ ಮಾಡುವುದಾದರೂ ಹೇಗೆ? ಎಂದು ಪ್ರಶ್ನಿಸಿದ ಸದಸ್ಯರು, ನಿಮ್ಮ ಬಳಿ ಮಾಹಿತಿ ಇದ್ದರೆ ನೀಡಿ ಇಲ್ಲವಾದರೆ, ನಾವೇ ನಿಮಗೆ ನಮ್ಮ ಬಳಿ ಇರುವ ಮಾಹಿತಿ ನೀಡುತ್ತೇವೆ ಎಂದು ಅಧಿಕಾರಿಗಳಿಗೆ ಸದಸ್ಯರು ಸವಾಲು ಹಾಕಿದರು.

ಜಿಲ್ಲೆಯಲ್ಲಿರುವ 746 ಕಿರು ನೀರು ಸರಬರಾಜು ಯೋಜನೆಗಳು ಸುವ್ಯವಸ್ಥಿತವಾಗಿವೆ ಎಂದು ಹೇಳುತ್ತೀರಿ, ರಾಣೆಬೆನ್ನೂರ ತಾಲ್ಲೂಕಿನಲ್ಲಷ್ಟೆ 46 ಕಿರು ನೀರು ಸರಬರಾಜು ಯೋಜನೆ ಸಂಪೂರ್ಣ ಸ್ಥಗಿತಗೊಂಡಿವೆ. 76 ಯೋಜನೆಗಳು ದುರಸ್ತಿಯಲ್ಲಿವೆ. ಇನ್ನೂ ಜಿಲ್ಲೆಯ ಅಂಕಿ ಅಂಶ ನೋಡಿದಾಗ ಗಾಬರಿಯಾಗುತ್ತದೆ. ಇಂತಹದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳುವ ಮೂಲಕ ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಸದಸ್ಯ ಸಂತೋಷ ಪಾಟೀಲ ಆರೋಪಿಸಿದರು.

ಬರ ಪರಿಹಾರ ಕಾಮಗಾರಿಯಲ್ಲಿ ಕೈಗೊಳ್ಳಲಾದ ಕುಡಿಯುವ ನೀರಿನ ಕಾಮಗಾರಿಗಳನ್ನು ಯಾವುದೇ ಜಿ.ಪಂ. ಸದಸ್ಯರ ಗಮನಕ್ಕೆ ತಾರದೇ ಕೈಗೊಳ್ಳಲಾಗಿದೆ. ಇದರಿಂದ ನಿಜವಾದ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ ಎಂದು ಸದಸ್ಯ ಬಸನಗೌಡ ಇನಾಮತಿ  ಹೇಳಿದರು.

ತಮ್ಮ ತಪ್ಪನ್ನು ಒಪ್ಪಿಕೊಂಡ ಜಿ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು, ಸದಸ್ಯರಿಗೆ ಕುಡಿಯುವ ನೀರಿನ ಯೋಜನೆ ಬಗ್ಗೆ ಸೂಕ್ತ ಮಾಹಿತಿ ನೀಡಲಾಗುವುದಲ್ಲದೇ, ಕುಡಿಯುವ ನೀರಿನ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ತಾಲ್ಲೂಕುವಾರು ಸಭೆಗಳನ್ನು ನಡೆಸಿ ಆಯಾ ತಾಲ್ಲೂಕಿನ ಎಲ್ಲ ಜಿ.ಪಂ. ಸದಸ್ಯರ ಜತೆ ಚರ್ಚಿಸಲಾಗುವುದು ಎಂದು ಸಮಜಾಯಿಸಿ ನೀಡಿದರು.

8 ವರ್ಷದಿಂದ ಮಾಹಿತಿ ಇಲ್ಲ: ರಾಣೆಬೆನ್ನೂರ ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಕಳೆದ 8 ವರ್ಷದಿಂದ ಕೇಳುತ್ತಿದ್ದರೂ ಅಧಿಕಾರಿಗಳು ಮಾತ್ರ ನೀಡುತ್ತಿಲ್ಲ ಎಂದು ರಾಣೆಬೆನ್ನೂರ ಶಾಸಕ ಜಿ.ಶಿವಣ್ಣ ಆರೋಪಿಸಿದರು.

ಅಧಿಕಾರಿಗಳಿಗೆ ಮಾಹಿತಿ ನೀಡಲು ಸಾಧ್ಯವಾಗುತ್ತಿದ್ದರೆ ನೀಡುವಂತೆ ತಿಳಿಸಿ, ಇಲ್ಲವಾದರೆ, ನಮಗೆ ಹೇಗೆ ತೆಗೆದುಕೊಳ್ಳಬೇಕೆಂಬುದು ಗೊತ್ತಿಗೆ ತೆಗೆದುಕೊಳ್ಳುತ್ತೇವೆ ಎಂದು ಖಡಕ್‌ಗಾಗಿ ಹೇಳಿದರು.
ಇದರಿಂದ ಗಲಿಬಿಲಿಗೊಂಡ ಜಿ.ಪಂ.ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಅವರು, ಸಂಜೆಯೊಳಗಾಗಿಯೇ ಶಾಸಕರಿಗೆ ನೀರಿನ ಸಮಸ್ಯೆ ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಳೇ ಕಾಮಗಾರಿ ಪೂರ್ಣಗೊಳಿಸಿ: ಹಳೇ ಕಾಮಗಾರಿಗಳು ಬಾಕಿ ಇರುಗಲೇ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ರಾಣೆಬೆನ್ನೂರ ತಾಲ್ಲೂಕಿನ ಮಾಕನೂರು ಗ್ರಾಮದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸುಮಾರು 42 ಲಕ್ಷ ರೂ. ವೆಚ್ಚದಲ್ಲಿ ಕಳೆದ ಮೂರು ವರ್ಷಗಳಿಂದ ನಡೆದಿದೆ. ಈವರೆಗೆ ಪೂರ್ಣಗೊಳಿಸಿಲ್ಲ. ಇಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಜಿ.ಪಂ.ಸದಸ್ಯ ಮಂಜುನಾಥ ಓಲೇಕಾರ ಒತ್ತಾಯಿಸಿದರು.

ಮಾಕನೂರು ಗ್ರಾಮದ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಇಲಾಖೆಯಿಂದ ಸಮಸ್ಯೆಯಾಗಿದ್ದು, ಅದನ್ನು ಸರಿಪಡಿಸಿ ಮಾರ್ಚ ಅಂತ್ಯದೊಳಗೆ ಯೋಜನೆ ಆರಂಭಿಸುವುದಾಗಿ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭರವಸೆ ನೀಡಿದರು.

ದನಕರುಗಳಿಗೂ ನೀರು ಕೊಡಿ: ಬೇಸಿಗೆ ಹಾಗೂ ಬರದ ಬವಣೆಯಿಂದ ಜಿಲ್ಲೆಯ ಬಹುತೇಕ ಕೆರೆ, ಕಟ್ಟೆಗಳು ಒಣಗಿ ಹೋಗಿದ್ದು, ದನಕರುಗಳಿಗೆ ಕುಡಿಯುವ ನೀರು ಇಲ್ಲದಂತಾಗಿದೆ. ತಕ್ಷಣವೇ ಮನುಷ್ಯರಿಗೆ ಕುಡಿಯುವ ನೀರು ಒದಗಿಸಲು ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿಯೇ ದನಕರುಗಳಿಗೆ ಕುಡಿಯುವ ನೀರು ಒದಗಿಸುವಂತೆ ಸದಸ್ಯ ಶಶಿಧರ ಹೊಣೆನ್ನವರ ಒತ್ತಾಯಿಸಿದಾಗ, ಕೇವಲ ದನಕರುಗಳಷ್ಟೇ ಅಲ್ಲದೇ ಕಾಡು ಪ್ರಾಣಿಗಳಾದ ಕೃಷ್ಣಮೃಗ, ಚಿಗರೆ, ಪಕ್ಷಿಗಳಾದ ನವಿಲುಗಳಿಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ಸದಸ್ಯ ಪದ್ಮನಾಭ ಕುಂದಾಪುರ ಅವರು ಆನೆಗಳಿಗೂ ನೀರಿನ ವ್ಯವಸ್ಥೆ ಮಾಡಿ ಇಲ್ಲವಾದರೆ, ಅವು ಕಾಡು ಬಿಟ್ಟು ನಾಡಿಗೆ ಬಂದಾವು ಎಂದು ಸಲಹೆ ಮಾಡಿದಾಗ, ಅದಕ್ಕೂ ಗಮನಹರಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.