ADVERTISEMENT

`ಧರ್ಮಾಚರಣೆಯಿಂದ ವಿಶ್ವಕ್ಕೆ ಶಾಂತಿ'

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2013, 9:02 IST
Last Updated 22 ಫೆಬ್ರುವರಿ 2013, 9:02 IST
ಅಕ್ಕಿಆಲೂರಿನ ವಿರಕ್ತಮಠದಲ್ಲಿ ನಡೆದ ಹಾನಗಲ್ ಕುಮಾರ ಶಿವಯೋಗಿಗಳ ಪುರಾಣ ಪ್ರಾರಂಭೋತ್ಸವವನ್ನು ಹಾವೇರಿಯ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. ಶಿವಯೋಗೀಶ್ವರ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಚಿತ್ರದಲ್ಲಿದ್ದಾರೆ.
ಅಕ್ಕಿಆಲೂರಿನ ವಿರಕ್ತಮಠದಲ್ಲಿ ನಡೆದ ಹಾನಗಲ್ ಕುಮಾರ ಶಿವಯೋಗಿಗಳ ಪುರಾಣ ಪ್ರಾರಂಭೋತ್ಸವವನ್ನು ಹಾವೇರಿಯ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. ಶಿವಯೋಗೀಶ್ವರ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಚಿತ್ರದಲ್ಲಿದ್ದಾರೆ.   

ಅಕ್ಕಿಆಲೂರ: `ಸದಾಶಯ, ಸಹಬಾಳ್ವೆಯ ಧರ್ಮಾಚರಣೆಯಿಂದ ವಿಶ್ವಕ್ಕೆ ಶಾಂತಿ ಲಭಿಸಲಿದೆ. ಭಾರತೀಯ ನೆಲದಲ್ಲಿ ಭ್ರಾತೃತ್ವ ಭಾವ ಮೂಡಿಸಿದ ಈ ಸಂಸ್ಕೃತಿ ಶತಶತಮಾನಗಳಿಂದ ಜನಾಂಗವನ್ನು ಸಂರಕ್ಷಿಸುತ್ತಿದೆ. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸಲಿದೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು' ಎಂದು ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನುಡಿದರು.

ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದಲ್ಲಿ ಏರ್ಪಡಿಸಿದ್ದ ಲಿಂ.ಹಾನಗಲ್ ಕುಮಾರ ಶಿವಯೋಗಿಗಳ ಪುರಾಣ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

`ನಮ್ಮೆಲ್ಲರನ್ನು ಮಾನವೀಯ ನೆಲೆಗಟ್ಟಿನ ಮೇಲೆ ಸಮನ್ವಯ ದೃಷ್ಟಿಕೋನದಿಂದ ಬೆಸೆದ ಧರ್ಮದ ಜಾಗೃತಿಗೆ ಪುರಾತನ ಕಾಲದಿಂದಲೂ ಮಹಾ ಮಹಿಮರು ತಮ್ಮನ್ನೇ ಅರ್ಪಿಸಿಕೊಂಡಿದ್ದು, ಅಂತವರಲ್ಲಿ ಲಿಂ.ಹಾನಗಲ್ ಕುಮಾರ ಶಿವಯೋಗಿಗಳು ಪ್ರಮುಖರು' ಎಂದರು. `ಧರ್ಮ, ಸಂಸ್ಕೃತಿಯ ಬಗ್ಗೆ ಅಭಿಮಾನ, ಮಾನವೀಯ ಮೌಲ್ಯಗಳನ್ನು ಹೊಂದಿರುವ ದೇಶ ಭಾರತ.

ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಂಡಿರುವ ಧರ್ಮ ತನ್ನ ಬೋಧನೆ, ಆಚರಣೆ, ನೀತಿ, ನಿಯಮಗಳಿಂದ ಅಧರ್ಮದ ವಿರುದ್ಧ ಯಾವಾಗಲೂ ಜಯ ಸಾಧಿಸುತ್ತಾ ಬಂದಿದೆ' ಎಂದರು.

ಗುಡ್ಡದಆನ್ವೇರಿಯ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ನಮ್ಮ ನಾಡಿನ ನೆಲದಲ್ಲಿ ಅವಿಚ್ಛಿನ್ನವಾಗಿ ಅರಳಿ ಬೆಳೆದು ಹೆಮ್ಮರವಾದ ಧರ್ಮದ ಸಾಧನೆ ಬೆಳಕಲ್ಲಿ ಸಾಗಿದ ಮಠ, ಪೀಠ, ಸಂಸ್ಥಾನಗಳು ತಮ್ಮ ಅನನ್ಯ ಕಾಳಜಿಯಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ನವ ಚೈತನ್ಯ ಮೂಡಿಸಿವೆ' ಎಂದರು.

ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಜಿ.ಶಾಂತಪುರಮಠ, ಪೊಲೀಸ್ ಇಲಾಖೆಯ ಬಿ.ವೈ.ಇಟಗಿ ಭಾಗವಹಿಸಿದ್ದರು.

ಸೋಮಯ್ಯಗವಾಯಿ ಬಿಳೇಬಾಳ ಸಂಗೀತ ನೀಡಿದರು. ಪ್ರವೀಣಕುಮಾರ ಬೆಳಗಾಲಪೇಟೆ ತಬಲಾ ಸಾಥ್ ನೀಡಿದರು.
ಶಿವಬಸಯ್ಯ ಚಿಲ್ಲೂರಮಠ ಸ್ವಾಗತಿಸಿದರು. ಷಣ್ಮುಖಪ್ಪ ಮುಚ್ಚಂಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಿ.ಎಂ.ಅರಳೇಶ್ವರ ನಿರೂಪಿಸಿದರು. ವಿರೇಶ ನೆಲುವಿಗಿ ವಂದಿಸಿದರು.

ಕಾಮಗಾರಿ ದುರಸ್ತಿಗೆ ಹಣ ಬಿಡುಗಡೆ

ಹಾವೇರಿ: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕುಡಿಯುವ ನೀರಿನ ಪೈಪಲೈನ್ ಹಾಗೂ ಮೋಟರ್ ದುರಸ್ತಿ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳು 11.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ.

ತಾಲ್ಲೂಕಿನ ನೆಲೋಗಲ್ ಗ್ರಾಮಕ್ಕೆ 7.50 ಲಕ್ಷ ರೂಪಾಯಿ ಹಾಗೂ ಕುರುಬಗೊಂಡ ಗ್ರಾಮಕ್ಕೆ 4 ಲಕ್ಷ ರೂಪಾಯಿಗಳನ್ನು ಪಂಚಾಯತ್ ರಾಜ್ ಎಂಜನಿಯರಿಂಗ್ ವಿಭಾಗಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT