ADVERTISEMENT

ನಾಳೆ ಮಾಮ್ಲೆದೇಸಾಯಿ ಹೈಸ್ಕೂಲ್ ವಜ್ರಮಹೋತ್ಸವ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:15 IST
Last Updated 18 ಫೆಬ್ರುವರಿ 2011, 9:15 IST

ಶಿಗ್ಗಾಂವ: ಪಟ್ಟಣದ ಎಸ್.ಬಿ.ಬಿ. ಎಂ.ಡಿ. ಸಂಯುಕ್ತ ಪದವಿಪೂರ್ವ ಕಾಲೇಜಿನ ವಜ್ರಮಹೋತ್ಸವ ಸಮಾರಂಭ ಫೆ.19ರಂದು ನಡೆಯಲಿದೆ. ಈಗ ಹಾವೇರಿ ಜಿಲ್ಲೆಯಲ್ಲಿರುವ ಶಿಗ್ಗಾಂವ 1946ರಲ್ಲಿ ಅಖಂಡ ಧಾರವಾಡ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿತ್ತು. 

 ಗಜಾನನ ಆಂಗ್ಲೋ ವರ್ನಾಕ್ಯುಲರ್ ಎಂಬ ಸಂಸ್ಥೆಯನ್ನು 1946ರಲ್ಲಿ  ಅನಂತ ಭಟ್ ಕೇಶವ ಭಟ್ ಹುರಳಿಕುಪ್ಪಿ ಸ್ಥಾಪಿಸಿದರು. ಮೊದಲು ಐವರು ವಿದ್ಯಾರ್ಥಿಗಳು ಮತ್ತು ಮೂವರು ವಿದ್ಯಾರ್ಥಿನಿಯರಿಂದ ಶಾಲೆ ಆರಂಭವಾಯಿತು. ನಂತರದ ದಿನಗಳಲ್ಲಿ ಈ ಶಾಲೆಯನ್ನು ಶಿಗ್ಗಾವಿಯ  ವಿರಕ್ತಮಠದ ಲಿಂಗೈಕ್ಯ  ಬಸವಲಿಂಗ ಸ್ವಾಮೀಜಿ ನಡೆಸಿದರು. ಅವರಿಗೂ ಶಾಲೆ ನಡೆಸುವುದು ದುಸ್ತರವಾದಾಗ 1954ರಲ್ಲಿ ಶಿಗ್ಗಾಂವ ತಾಲ್ಲೂಕು ಶಿಕ್ಷಣ ಸಮಿತಿ ರಚನೆಯಾಗಿ, ಶಾಲೆಯನ್ನು ಮುನ್ನಡೆಸಿತು.

1963ರಲ್ಲಿ ಆರ್.ಬಿ. ಮಾಮ್ಲೆದೇಸಾಯಿಯವರು ಶಾಲೆಗೆ ಭೂಮಿಯನ್ನು ದಾನ ಮಾಡಿದ್ದ ಸ್ಮರಣಾರ್ಥ ಅವರ ಅಜ್ಜನವರ ಹೆಸರಿನಲ್ಲಿ ಗಜಾನನ ಹೈಸ್ಕೂಲ್‌ಗೆ ಶ್ರೀಮಂತ ಬಸವಂತರಾವ್ ಬುಳ್ಳಪ್ಪ ಮಾಮ್ಲೆದೇಸಾಯಿ ಹೈಸ್ಕೂಲ್ ಎಂದು ನಾಮಕರಣ ಮಾಡಲಾಯಿತು. 1967ರಲ್ಲಿ ಪ್ರೌಢಶಾಲೆಯು ಸರ್ಕಾರದಿಂದ ಅನುದಾನಕ್ಕೊಳಪಟ್ಟಿತು. ಸತತ ಮೂರು ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆದು ಶಾಶ್ವತ ಮನ್ನಣೆ ಪಡೆಯಿತು.

1984 ರಲ್ಲಿ ಶಿ.ತಾ.ಶಿ. ಸಮಿತಿ ಶಿಗ್ಗಾಂವದಲ್ಲಿ ಪಿಯು ಕಾಲೇಜು ಆರಂಭಿಸಿತು. 1991ರಲ್ಲಿ ಅದು ಅನುದಾನ ಪಡೆಯಿತು. 1992ರಲ್ಲಿ ಈ ಸಂಸ್ಥೆಯು ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿತು. 2009ರಲ್ಲಿ ಪ್ರಾಥಮಿಕ ಶಾಲೆಯು ಅನುದಾನಕ್ಕೆ ಒಳಪಟ್ಟಿತು. ಪ್ರಾಥಮಿಕಶಾಲೆ ಅನುದಾನಕ್ಕೆ ಒಳಪಡುವವರೆಗೂ  17 ವರ್ಷಗಳ ಕಾಲ ಅನುದಾನ ರಹಿತವಾಗಿ ಶಿ.ತಾ.ಶಿ.ಸಮಿತಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿತು.

ಆರಂಭದಲ್ಲಿ ಎಂಟು ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆ ಇಂದು ಸುಮಾರು 2000 ವಿದ್ಯಾರ್ಥಿಗಳ ಬೃಹತ್ ಸಮೂಹವನ್ನು, 53 ಬೋಧಕರು, 13 ಬೋಧಕೇತರರು, ಪ್ರಾಚಾರ್ಯರು, ಉಪಪ್ರಾಚಾರ್ಯರನ್ನು ಹಾಗೂ ಮುಖ್ಯೋಪಾಧ್ಯಾಯರನ್ನು ಹೊಂದಿದೆ. 60 ಸಂವತ್ಸರ ಪೂರೈಸಿ, ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ  ಸಂಸ್ಥೆ ಜಿಲ್ಲೆಯಲ್ಲಿಯೇ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆ ಹೆಸರು ಗಳಿಸಿದ್ದು, ಇಲ್ಲಿ ಓದಿದ ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಾಡಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ, ಹಲವು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.