ADVERTISEMENT

ನೀರು ಪೂರೈಕೆಗಾಗಿ ಖಾಲಿ ಕೊಡ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 9:40 IST
Last Updated 16 ಜುಲೈ 2012, 9:40 IST

ಬ್ಯಾಡಗಿ: ಪಟ್ಟಣದ ವಿನಾಯಕ ನಗರದ ಮಹಿಳೆಯರು ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶುಕ್ರವಾರ ಪುರಸಭೆಯ ಮುಂದೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಬಡಾವಣೆಯ ನಿವಾಸಿ ಫಕ್ಕೀರಮ್ಮ ಚಲವಾದಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಇಲ್ಲಿಯ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ನೀರಿಗಾಗಿ ಕೊಡಗಳನ್ನು ಹಿಡಿದುಕೊಂಡು ಅಲೆದಾಡುವಂತಾಗಿದೆ ಎಂದು ಆರೋಪಿಸಿದರು.

ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವಂತೆ ಜಲ ಮಂಡಳಿ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದೆ. ಆದರೆ ಅದಕ್ಕೆ ತಕ್ಕಂತೆ ಕೆಲಸ ಆಗಿಲ್ಲ. ಪಟ್ಟಣದ ಬಹುತೇಕ ಬಡಾವಣೆಗಳಲ್ಲಿಯೂ ಇಂಥದೇ ಸಮಸ್ಯೆ ಇದೆ.  ಹಲವು ವರ್ಷಗಳಿಂದ ವಿನಾಯಕ ನಗರ ಬಡಾವಣೆಯ ಜನರು ಕುಡಿಯುವ ನೀರಿನ ಪೂರೈಕೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
 
ಹಲವಾರು ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ. ಪ್ರತಿ ಬಾರಿಯೂ ಭರವಸೆ ನೀಡುವ ಅಧಿಕಾರಿಗಳಿಗೆ ತಮ್ಮ ಸಮಸ್ಯೆಯ ಅರಿವಾಗಿಲ್ಲ ಎಂದು ದೂರಿದ್ದಾರೆ.


ಬಡಾವಣೆಯ ಮಹಿಳೆಯರು ದಿನದ ಬಹುತೇಕ ಸಮಯವನ್ನು ನೀರು ತರುವುದಕ್ಕಾಗಿಯೆ ಮೀಸಲಿಡುವಂತಾಗಿದೆ. ಈ ಸಂಕಷ್ಟದಿಂದ ಪಾರು ಮಾಡಿ, ಸಮರ್ಪಕ ರೀತಿಯಲ್ಲಿ ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT